ದೇವನಹಳ್ಳಿ(ಬೆಂಗಳೂರು): ಯುದ್ದ ಪೀಡಿತ ಉಕ್ರೇನ್ನ ಸುಮಿಯಿಂದ ನಾಲ್ವರು ವಿದ್ಯಾರ್ಥಿಗಳು ನಿನ್ನೆ (ಶುಕ್ರವಾರ) ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದರು. ಏರ್ಪೋರ್ಟ್ನಲ್ಲಿ ತುಂಬು ಹೃದಯದಿಂದ ಪೋಷಕರು ಅವರನ್ನು ಬರಮಾಡಿಕೊಂಡರು.
ಉಕ್ರೇನ್ನಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳನ್ನು 'ಆಪರೇಷನ್ ಗಂಗಾ' ಯೋಜನೆಯಡಿ ಕರೆತರಲಾಗುತ್ತಿದೆ. ಅದರಂತೆ ಶುಕ್ರವಾರ ನಾಲ್ವರು ಕನ್ನಡಿಗರು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಉಕ್ರೇನ್ನ ಸುಮಿಯಲ್ಲಿ ಸಿಲುಕಿದ ಅಕ್ಷರ್, ಶ್ರೀಜಾ, ಶ್ರಿಯ ಮತ್ತು ಸ್ನೇಹ ತಾಯ್ನಾಡಿಗೆ ಮರಳಿದ ವಿದ್ಯಾರ್ಥಿಗಳು.
ಇದೇ ವೇಳೆ ಮಾತನಾಡಿದ ವಿದ್ಯಾರ್ಥಿಗಳು, ಸುಮಿ ಪ್ರಾಂತ್ಯದಲ್ಲಿ ಭಾರತದ 600 ಮಂದಿ ವಿದ್ಯಾರ್ಥಿಗಳಿದ್ದಾರೆ. ಕೀವ್ ಹಾಗೂ ಖಾರ್ಕಿವ್ನಲ್ಲಿ ಯುದ್ದ ತೀವ್ರವಾಗಿತ್ತು. ಸುಮಿಯ ಕೆಲ ಪ್ರಾಂತ್ಯಗಳಲ್ಲಿಯೂ ಯುದ್ದ ಪ್ರಾರಂಭವಾಯಿತು.
ಈ ಸಮಯದಲ್ಲಿ ನಾವು ಸುಮಿ ಯುನಿವರ್ಸಿಟಿಯಲ್ಲಿ ಇದ್ದೆವು. ಯುದ್ದ ಪ್ರಾರಂಭವಾದ ನಂತರ ನಮಗೆ ನೀರಿನ ಸಮಸ್ಯೆ ಹಾಗೂ ವಿದ್ಯುತ್ ಸಮಸ್ಯೆ ಉಂಟಾಯಿತು. ಹೀಗಾಗಿ, ಸುಮಿಯಿಂದ ರಷ್ಯಾದ ಮೂಲಕ ಭಾರತಕ್ಕೆ ತೆರಳಲು ನಿರ್ಧರಿದೆವು.
ಆದರೆ, ರಷ್ಯಾ ಸೈನಿಕರಿಂದ ಫೈರಿಂಗ್ ಭಯದಲ್ಲಿ ಪೋಲ್ಯಾಂಡ್ ಗಡಿಗೆ ಕಷ್ಟ ಪಟ್ಟು ತಲುಪಿದೆವು. ಅಲ್ಲಿಂದ ಇಂಡಿಯನ್ ಎಂಬಸಿ ಆಪರೇಷನ್ ಗಂಗಾ ಯೋಜನೆಯಡಿ ಸುಮಿ ವಿದ್ಯಾರ್ಥಿಗಳನ್ನು ಕರೆತರುವ ವಿಮಾನದಲ್ಲಿ ದೆಹಲಿಗೆ ಬಂದೆವು. ಅಲ್ಲಿಂದ ರಾಜ್ಯಕ್ಕೆ ಮರಳಿದೆವು ಎಂದು ವಿದ್ಯಾರ್ಥಿಗಳು ವಿವರಿಸಿದರು.
ಇದನ್ನೂ ಓದಿ: ಭಾರತ ಸರ್ಕಾರದ ನಡೆ ಸುರಕ್ಷತೆಗೆ ಸಾಕ್ಷಿ: ಉ್ರಕೇನ್ನಿಂದ ಮರಳಿದ ವಿದ್ಯಾರ್ಥಿಯಿಂದ ಗುಣಗಾನ