ಬೆಂಗಳೂರು: ದಲಿತ ಪರ ಹೋರಾಟದಲ್ಲಿ ತೊಡಗಿರುವ ನಾಲ್ವರು ಪ್ರಮುಖ ನಾಯಕರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸುದಾಂ ದಾಸ್, ಡಾ.ಗೋಪಾಲ್, ಅಂಬಣ್ಣ, ಹೆಣ್ಣೂರು ಶ್ರೀನಿವಾಸ್ ಅವರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪಕ್ಷಕ್ಕೆ ಬರಮಾಡಿಕೊಂಡರು.
ನಂತರ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದವರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳುವ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ. ಇವರ ಹಕ್ಕಿಗಾಗಿ ನಾವು ನಿರಂತರವಾಗಿ ಹೋರಾಡುತ್ತಾ ಬಂದಿದ್ದೇವೆ. ನಮ್ಮ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷದಿಂದ ಹೊರಗಿರುವ ಇತರೆ ರಾಜಕೀಯ ನಾಯಕರು ವಿಮರ್ಶಿಸುವ ಕಾರ್ಯ ಮಾಡಿದ್ದಾರೆ. ನಾವು ನಡೆದುಕೊಂಡು ಹೋಗುತ್ತಿರುವ ಹಾದಿ ಸರಿಯಾಗಿಲ್ಲ ಎಂದು ದೂರಿದ್ದಾರೆ. ಆದರೆ ನಾವು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಾಕಷ್ಟು ಅನುಕೂಲ ಬಂದಿದ್ದೇವೆ ಎಂದು ಹೇಳಿದರು.
ಬೊಮ್ಮಾಯಿ ಸರ್ಕಾರ ದಲಿತರಿಗೆ ಮೋಸ ಮಾಡಿದೆ. ಸದನದಲ್ಲಿಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡುವುದಾಗಿ ಘೋಷಿಸಿದೆ. ಆದರೆ ಇದೀಗ ಮೀಸಲಾತಿ ಪ್ರಮಾಣ ಹೆಚ್ಚಿಸುವ ವಿಚಾರ ಕುರಿತು ಕರ್ನಾಟಕದಿಂದ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ಸಂಸತ್ನಲ್ಲಿಯೇ ಕೇಂದ್ರ ಸಚಿವರು ಹೇಳಿದ್ದಾರೆ. ಇಂಥದೊಂದು ದೊಡ್ಡ ಮೋಸಕ್ಕೆ ನಾವು ದನಿ ಎತ್ತಬೇಕು. ಸಂವಿಧಾನದ 9ನೇ ಶೆಡ್ಯೂಲ್ಗೆ ಈ ವಿಚಾರವನ್ನು ಸೇರಿಸುವಂತೆ ನಾವು ಒತ್ತಾಯ ಮಾಡಿದ್ದೆವು. ಆದರೆ ಕರ್ನಾಟಕ ಸರ್ಕಾರ ಈ ಕಾರ್ಯವನ್ನು ಮಾಡುವಲ್ಲಿ ವಿಫಲವಾಗಿದೆ.
ಬೊಮ್ಮಾಯಿ ರಾಜೀನಾಮೆ ನೀಡಲಿ: ಕನಿಷ್ಠ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸದೆ ಒಂದು ಸಮುದಾಯಕ್ಕೆ ದೊಡ್ಡ ಮೋಸ ಮಾಡಿದೆ. ಶೇ.50 ರಿಂದ ಶೇ.56 ಕ್ಕೆ ಮೀಸಲಾತಿ ಹೆಚ್ಚಿಸುವ ಕಾರ್ಯ ಆಗಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ದಲಿತ ಸಮುದಾಯಕ್ಕೆ ಮೋಸ ಮಾಡಿದ್ದಾರೆ. ಇದಕ್ಕೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬೊಮ್ಮಾಯಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜ್ಯದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾಗಿರುವ ನಾಲ್ವರು ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತೇವೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ಬಿಜೆಪಿಯ ಸಚಿವರು, ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆಕೊಟ್ಟರು.
ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮಾತನಾಡಿ, ದಲಿತರ ಸಮಸ್ಯೆಗಳ ವಿರುದ್ಧ ರಾಜ್ಯ ಹಾಗೂ ರಾಷ್ಟ್ರದಲ್ಲಿ ಅನೇಕ ರೀತಿಯಲ್ಲಿ ಹೋರಾಟಗಳನ್ನು ಮಾಡುತ್ತಿದ್ದೇವೆ. ಸರ್ಕಾರಕ್ಕೆ ಎಚ್ಚರಿಸುವ ಕಾರ್ಯ ಮಾಡುವ ಜೊತೆಗೆ ಸಮಸ್ಯೆಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ನಿರ್ಮಿಸಿದ ದಲಿತ ಸಮುದಾಯಗಳ ಒಕ್ಕೂಟದ ಮುಂಚೂಣಿಯ ನಾಯಕ ಸುದಾಂ ದಾಸ್, ಡಾ. ಗೋಪಾಲ್, ಅಂಬಣ್ಣ, ಹೆಣ್ಣೂರು ಶ್ರೀನಿವಾಸ್ ಇಂದು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಇವರೆಲ್ಲರೂ ಕಾಂಗ್ರೆಸ್ ಪಕ್ಷದ ಹೊರಗಡೆ ಇದ್ದು ದಲಿತರ ಪರವಾಗಿ ಹೋರಾಟ ನಡೆಸಿದರು. ತಮ್ಮ ಹೋರಾಟಕ್ಕೆ ಬೆಲೆ ಸಿಗಬೇಕಾದರೆ ಅದು ಕಾಂಗ್ರೆಸ್ನಿಂದ ಮಾತ್ರ ಎಂಬುದು ಅರಿವಾಗಿದೆ. ಇದರಿಂದಾಗಿ ನಮ್ಮನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.
ಈ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂಬ ಧ್ಯೇಯ ಕಾಂಗ್ರೆಸ್ಗೆ ಇದ್ದು ಇವರನ್ನು ಮುಕ್ತವಾಗಿ ಪಕ್ಷಕ್ಕೆ ಸ್ವಾಗತಿಸುತ್ತಿದ್ದೇವೆ. ಬಿಜೆಪಿಯವರು ಹಿಂದುಳಿದ ವರ್ಗದವರನ್ನು ನಿರಂತರವಾಗಿ ನಿರ್ಲಕ್ಷ್ಯ ಮಾಡಿಕೊಂಡು ಬಂದಿದ್ದಾರೆ. ಇವರನ್ನು ಸಂಪೂರ್ಣವಾಗಿ ಹತ್ತಿಕುವ ಯತ್ನವನ್ನು ಮಾಡುತ್ತಿದ್ದಾರೆ. ಇಂದು ಲೋಕಸಭೆ ಸದನದಲ್ಲಿ ಸಹ ಇಂಥದ್ದೇ ಸನ್ನಿವೇಶ ನಡೆದಿದೆ. ಹೊಸ ವಿಚಾರ ಗಮನಕ್ಕೆ ಬಂದಿದೆ. ದಲಿತರಿಗೆ ಮೀಸಲಾತಿ ಹೆಚ್ಚಿಸುತ್ತೇವೆ ಎಂದು ಕರ್ನಾಟಕದಲ್ಲಿ ಘೋಷಣೆ ಮಾಡುತ್ತಾರೆ. ನಾವು ದಲಿತರಿಗೆ ಮೀಸಲಾತಿ ಕೊಟ್ಟಿದ್ದೇವೆ ಎಂದಿದ್ದಾರೆ.
ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರಿಗೆ ಮೋಸ ಮಾಡಿರುವುದು ಬಯಲಾಗಿದೆ. ಕರ್ನಾಟಕ ಸರ್ಕಾರದಿಂದ ಕೇಂದ್ರಕ್ಕೆ ಮೀಸಲಾತಿ ವಿಚಾರವಾಗಿ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿ ಸಂಸತ್ನಲ್ಲಿ ತಿಳಿಸಿದ್ದಾರೆ. ಈ ಒಂದು ಮೋಸದ ವಿರುದ್ಧ ಧ್ವನಿ ಎತ್ತಬೇಕು ಎಂದು ರಾಜ್ಯದ ದಲಿತ ಸಮುದಾಯಕ್ಕೆ ಮನವಿ ಮಾಡುತ್ತೇನೆ. ನಾವು ಈ ವಿಚಾರ ಮುಂದಿಟ್ಟು ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕು. ಇದು ನಮ್ಮ ಹಕ್ಕಿನ ಪ್ರಶ್ನೆ. ಹಾಗಾಗಿ ಬಸವರಾಜ ಬೊಮ್ಮಾಯಿ ನೀಡಿದ ಹೇಳಿಕೆಗೆ ಪ್ರಧಾನಿ ಪ್ರತಿಕ್ರಿಯೆ ನೀಡಿಲ್ಲ. ಇಡೀ ರಾಜ್ಯಾದ್ಯಂತ ವಿಚಾರ ಮುಂದಿಟ್ಟು ನಾವು ಹೋರಾಟ ನಡೆಸಬೇಕಿದೆ. ಇಂದು ಸಂಜೆಯೊಳಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಕೇಂದ್ರದ ಮಾಜಿ ಸಚಿವ ಕೆಎಚ್ ಮುನಿಯಪ್ಪ, ಮಾಜಿ ಸಚಿವ ಟಿ ಆಂಜನೇಯ, ರಾಜ್ಯಸಭೆ ಮಾಜಿ ಸದಸ್ಯ ರಾಜೀವ್ ಗೌಡ ಮತ್ತಿತರ ನಾಯಕರು ಉಪಸ್ಥಿತರಿದ್ದರು.
ಇದನ್ನೂ ಓದಿ: ಕರ್ನಾಟಕದ 800 ಹಳ್ಳಿಗಳಿಗೆ ಮಹಾಸರ್ಕಾರದ ಸಹಾಯ, ಇದು ಚುನಾವಣೆ ಗಿಮಿಕ್: ಡಿಕೆಶಿ ಆರೋಪ.