ಬೆಂಗಳೂರು : ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಎಲ್ಲೆಲ್ಲಿಯೂ ಐಪಿಎಲ್ ಜ್ವರ ಶುರುವಾಗಿದೆ. ಕ್ರಿಕೆಟ್ ಹಬ್ಬವನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬೆಟ್ಟಿಂಗ್ ದಂಧೆಕೋರರು ಕಾನೂನುಬಾಹಿರವಾಗಿ ಹಣ ಗಳಿಸುತ್ತಿದ್ದು, ಪಂದ್ಯ ನಡೆಯುವ ಕ್ರೀಡಾಂಗಣಕ್ಕ ತೆರಳಿ ಮ್ಯಾಚ್ ನಡೆಯುವಾಗಲೇ ಲೈವ್ ಆಗಿ ಬೆಟ್ಟಿಂಗ್ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನಾಲ್ವರು ದಂಧೆಕೋರರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ವಿಶಾಂತ್, ಅಮರ್ ಜಿತ್ ಸಿಂಗ್, ಮೋಹಿತ್ ಬಾತ್ರಾ ಹಾಗೂ ದುಶ್ಯಂತ್ ಕುಮಾರ್ ಸೋನಿ ಬಂಧಿತರು. ದಂಧೆಯ ಹಿಂದೆ ಹಲವರ ಕೈವಾಡವಿದ್ದು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.
ಇದನ್ನೂ ಓದಿ : ಬೆಟ್ಟಿಂಗ್ ಸಂಸ್ಥೆಯ ರಾಯಭಾರಿಯಾಗಿ ವಿವಾದದಲ್ಲಿ ಸಿಲುಕಿದ ಬ್ರೆಂಡನ್ ಮೆಕಲಮ್
ವ್ಯವಸ್ಥಿತವಾಗಿ ಸಂಚು ರೂಪಿಸಿ ಮ್ಯಾಚ್ ವೀಕ್ಷಿಸುವ ನೆಪದಲ್ಲಿ ಕ್ರೀಡಾಂಗಣಕ್ಕೆ ತೆರಳುತ್ತಿದ್ದ ಆರೋಪಿಗಳು ಅಲ್ಲಿ ಕುಳಿತು ಹೊರಗಿನ ವ್ಯಕ್ತಿಗಳೊಂದಿಗೆ ದಂಧೆ ನಡೆಸುತ್ತಿದ್ದರು. ಲೈವ್ ಮ್ಯಾಚ್ಗೂ ಹಾಗೂ ಟಿವಿಯಲ್ಲಿ ಪ್ರಸಾರವಾಗುವ ಸಮಯಕ್ಕೂ ಕೆಲವು ಕ್ಷಣಗಳ ವ್ಯತ್ಯಾಸವಿರುತ್ತದೆ. ಇದನ್ನೇ ಎನ್ ಕ್ಯಾಶ್ ಮಾಡಿಕೊಳ್ಳುತ್ತಿದ್ದ ಆರೋಪಿಗಳು ಪ್ರತಿ ಬಾಲ್ ಟು ಬಾಲ್ಗೆ ಬೆಟ್ಟಿಂಗ್ ಕಟ್ಟಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು. ಇದನ್ನು ತಿಳಿಯದ ಸಾರ್ವಜನಿಕರು ಆರೋಪಿಗಳು ತೋಡಿದ್ದ ಹಳ್ಳಕ್ಕೆ ಬೀಳುತ್ತಿದ್ದರು.
ಡಿಸಿಪಿ ಪ್ರತಿಕ್ರಿಯೆ: ಈ ಪ್ರಕರಣ ಸಂಬಂಧಿಸಿದಂತೆ ಮಾತನಾಡಿದ ನಗರ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ, ಬಾತ್ಮೀಯದಾರರು ನೀಡಿದ ಮಾಹಿತಿ ಮೇರೆಗೆ ಮಪ್ತಿಯಲ್ಲಿ 30ಕ್ಕಿಂತ ಹೆಚ್ಚು ಪೊಲೀಸ್ಸಿಬ್ಬಂದಿಯೊಂದಿಗೆ ಕ್ರೀಡಾಂಗಣದಲ್ಲಿ ಕಾರ್ಯಾಚರಣೆ ನಡೆಸಿದ್ದೆವು. ಈ ವೇಳೆ ಯಾರು ಪಂದ್ಯದ ಮಧ್ಯ ಫೋನಿನಲ್ಲಿ ಹೆಚ್ಚು ಆ್ಯಕ್ಟಿವ್ ಇರುತ್ತರೋ ಅವರ ಫೋನ್ ಚೆಕ್ ಮಾಡಿದ್ದು ಕ್ರಿಕೆಟ್ ಬೆಟ್ಟಿಂಗ್ ಆ್ಯಪ್ಗಳು ಇರುವುದು ಪತ್ತೆಯಾಗಿತ್ತು. ತತ್ಕ್ಷಣವೇ ನಾಲ್ವರು ಆರೋಪಿಗಳನ್ನು ಬಂಧಿಸಲಾಯಿತು.
ಇನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು ಬೆಂಗಳೂರು ಮಾತ್ರವಲ್ಲದೆ ದೇಶದಲ್ಲಿ ಇತರೆ ಭಾಗಗಳಲ್ಲಿ ಐಪಿಎಲ್ ಮ್ಯಾಚ್ಗಳು ನಡೆಯುವ ಕ್ರೀಡಾಂಗಣದಲ್ಲಿಯೂ ವ್ಯವಸ್ಥಿತ ಜಾಲದಿಂದ ಸದಸ್ಯರ ಮೂಲಕ ಅಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು ಎಂಬ ಮಾಹಿತಿ ಸಿಕ್ಕಿದೆ.ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ತಿಳಿದು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಸಿಪಿ ಮಾಹಿತಿ ನೀಡಿದರು.
ಇದನ್ನೂ ಓದಿ : 144 ಮೊಬೈಲ್‌ಗಳನ್ನು ವಾರಸುದಾರರಿಗೆ ಮರಳಿಸಿದ ಪೊಲೀಸರು: CEIR ಆ್ಯಪ್ ಬಳಕೆ ಗೊತ್ತೇ?