ಬೆಂಗಳೂರು: ವೃದ್ಧೆಯನ್ನು ಯಾಮಾರಿಸಿ ಮೂರೂವರೆ ಕೋಟಿ ರೂಪಾಯಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದ ಆರೋಪಿಗಳನ್ನು ಬನಶಂಕರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. 63 ವರ್ಷದ ಶಾಂತಾ ಎಂಬವರಿಗೆ ವಂಚಿಸಿದ್ದ ಅಪೂರ್ವ ಯಾದವ್, ಈಕೆಯ ತಾಯಿ ವಿಶಾಲ, ಸ್ನೇಹಿತೆ ಅರುಂಧತಿ ಹಾಗು ಪತಿ ರಾಕೇಶ್ ಬಂಧಿತರು.
ಪ್ರಕರಣದ ವಿವರ: ಬನಶಂಕರಿ 2ನೇ ಹಂತದ ಪದ್ಮನಾಭನಗರದಲ್ಲಿ ವಾಸವಿದ್ದ ವೃದ್ಧೆ ಶಾಂತಾ ಅವರ ಪತಿ ಇತ್ತೀಚೆಗಷ್ಟೆ ತೀರಿಕೊಂಡಿದ್ದರು. ಶಾಂತಾ ಮತ್ತು ಅವರ ಪುತ್ರಿ ಮಾತ್ರ ಮನೆಯಲ್ಲಿ ವಾಸವಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಅರುಂಧತಿ ಮತ್ತು ರಾಕೇಶ್ ದಂಪತಿ ಇನ್ಶುರೆನ್ಸ್ ಪಾಲಿಸಿ ಮಾಡಿಸುವ ನೆಪದಲ್ಲಿ ಶಾಂತಾರನ್ನು ಪರಿಚಯಿಸಿಕೊಂಡಿದ್ದಾರೆ. ಬಳಿಕ 'ನಿಮ್ಮ ಮನೆಯಲ್ಲಿ ದೋಷ ಇದೆ, ಮಾರಾಟ ಮಾಡಿ ಬಿಡಿ' ಎಂದು ನಂಬಿಸಿ, ತಾವೇ ಬ್ರೋಕರ್ ಮತ್ತು ಖರೀದಿದಾರರನ್ನು ಕರೆಸಿಕೊಂಡು ಮಾರಾಟ ಮಾಡಿಸಿದ್ದರು.
ಮನೆ ಮಾರಾಟದಿಂದ ಮೂರುವರೆ ಕೋಟಿ ರೂ ಹಣ ಶಾಂತಾರ ಬ್ಯಾಂಕ್ ಖಾತೆಗೆ ಜಮೆಯಾಗಿತ್ತು. ಬಳಿಕ 'ನಿಮ್ಮ ಪತಿಯ ಹೆಸರಿನಲ್ಲಿರುವ ಷೇರು ಹಣ ಪಡೆದುಕೊಳ್ಳಲು ನಿಮ್ಮ ಎಫ್.ಡಿ ಅಕೌಂಟ್ ಕ್ಲೋಸ್ ಮಾಡಿಸಬೇಕು' ಎಂದು ಬ್ಯಾಂಕ್‌ನಲ್ಲಿದ್ದ 1.90 ಕೋಟಿಯ ಎರಡು ಎಫ್.ಡಿ ಅಕೌಂಟ್ ಕ್ಲೋಸ್ ಮಾಡಿಸಿದ್ದರು. ಶಾಂತಾರಿಂದ ಐದಾರು ಖಾಲಿ ಚೆಕ್ ಪಡೆದು ಸಹಿ ಪಡೆದುಕೊಂಡಿದ್ದರು. ಬ್ಯಾಂಕ್‌ಗೆ ಕರೆದೊಯ್ದು ಒಂದು ದಿನ 2.20 ಕೋಟಿ ಮತ್ತೊಂದು ದಿನ 1.30 ಕೋಟಿ ರೂ ಹಣವನ್ನು ಅಪೂರ್ವ ತಾಯಿ ವಿಶಾಲಳ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು.
ಅಪೂರ್ವ, ಅರುಂಧತಿ ಸೇರಿ ತಲಾ 1.75 ಕೋಟಿ ರೂ ಹಂಚಿಕೊಂಡಿದ್ದರು. ಎಂಬಿಎ ಪಧವೀಧರೆಯಾದ ಅಪೂರ್ವ ಈ ಹಿಂದೆ ಬ್ಯಾಂಕ್ ಉದ್ಯೋಗಿಯಾಗಿದ್ದಳು. ಅಪೂರ್ವಳ ಮಾವ ಬ್ಯಾಂಕ್‌ನಿಂದ ಸಾಲ ಪಡೆದು ಶಿವಮೊಗ್ಗದಲ್ಲಿ ರೆಸಾರ್ಟ್ ಹೊಂದಿದ್ದ. ಸಾಲ ತೀರಿಸಲಾಗದೆ ಆತನ ಮನೆ ಹರಾಜಿಗೆ ಬಂದಿತ್ತು. ವಂಚಿಸಿದ ಹಣದಲ್ಲಿ 45 ಲಕ್ಷ ರೂ ಹಣ ಬಳಸಿ ಬ್ಯಾಂಕ್ ಸಾಲವನ್ನೂ ಆರೋಪಿಗಳು ಮರುಪಾವತಿ ಮಾಡಿದ್ದರು.
ಇಷ್ಟು ಸಾಲದೆಂಬಂತೆ ತನ್ನ ಪ್ರಿಯತಮನಿಗೂ 2 ಲಕ್ಷ ರೂ ಹಣವನ್ನು ಅಪೂರ್ವ ವರ್ಗಾಯಿಸಿದ್ದಳು. ಖಾತೆಯಲ್ಲಿರುವ ಹಣ ಖಾಲಿಯಾಗಿರುವುದನ್ನು ಗಮನಿಸಿದ್ದ ಶಾಂತಾ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಒಟ್ಟು 1.75 ಕೋಟಿ ರೂ ವಶಕ್ಕೆ ಪಡೆದುಕೊಂಡಿದ್ದಾರೆ. ಶಾಂತಾರ ಹಣದಿಂದ ಸಾಲ ತೀರಿಸಿದ್ದ ಹಣವನ್ನೂ ಸಹ ಹಿಂಪಡೆಯಲು ಬ್ಯಾಂಕ್‌ಗೆ ಪತ್ರ ಬರೆಯಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಪಿ. ಕೃಷ್ಟಕಾಂತ್ ತಿಳಿಸಿದ್ದಾರೆ.
ಇದನ್ನೂ ಓದಿ: ಕುಣಿಗಲ್ ಲಾಡ್ಜ್ನಲ್ಲಿ ಮಹಿಳೆ ಕೊಲೆ ಪ್ರಕರಣ: ಆರೋಪಿ ಬಂಧನ