ಬೆಂಗಳೂರು: ಆಮ್ ಆದ್ಮಿ ಪಕ್ಷದ 8 ನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು.
ಪಕ್ಷದ ಹಿರಿಯ ಮಾರ್ಗದರ್ಶಿ ಡಾ. ರಮೇಶ್, ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ನಗರ ಯೋಜನೆ ತಜ್ಞ ಅಶ್ವಿನಿ ಮಹೇಶ್, ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಗುರುವಾರ ಸಂಜೆ ಹಲಸೂರು ಕೆರೆ ಬಳಿಯ ಆರ್‌ಬಿಎನ್‌ಎಂಎಸ್ ಸಭಾಂಗಣದಲ್ಲಿ ನಡೆದ ಆಮ್ ಆದ್ಮಿ ಪಕ್ಷದ 8ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ವರ್ಷ ಎಂಟು ಸಾಧನೆ ನೂರೆಂಟು ಎನ್ನುವ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇಡೀ ಭಾರತದ ರಾಜಕೀಯ ಇತಿಹಾಸದಲ್ಲಿ ಇಷ್ಟು ವೇಗವಾಗಿ ಬೆಳೆದ ರಾಜಕೀಯ ಪಕ್ಷ ಇನ್ನೊಂದಿಲ್ಲ. ಕೇವಲ ಎಂಟು ವರ್ಷದಲ್ಲಿ ನೂರೆಂಟು ಸಾಧನೆ ಮಾಡಿದ ಆಮ್ ಆದ್ಮಿ ಪಕ್ಷ ದೇಶದ 130 ಕೋಟಿ ಜನರಲ್ಲಿ ಬದಲಾವಣೆಯ ಭರವಸೆ ಮೂಡಿಸಿದೆ ಎಂದು ಪಕ್ಷದ ಕರ್ನಾಟಕ ಉಸ್ತುವಾರಿ ರೋಮಿ ಭಾಟಿ ತಿಳಿಸಿದರು.
ಮಹಾತ್ಮ ಗಾಂಧೀಜಿ ಅವರ ಸ್ವರಾಜ್ಯ ಕಲ್ಪನೆಯ ಮೇಲೆ ಸ್ಥಾಪಿತವಾದ ಆಮ್ ಆದ್ಮಿ ಪಕ್ಷ ಇಂದು ದೇಶದಲ್ಲೇ ವೇಗವಾಗಿ ಬೆಳೆಯುತ್ತಿರುವ ರಾಜಕೀಯ ಪಕ್ಷವಾಗಿದ್ದು, ಭಾರತದ ಮುಂದಿನ ಭರವಸೆಯಾಗಿದೆ ಎಂದರು.
ರಾಷ್ಟ್ರೀಯ ನಾಯಕರಾದ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಗದ್ದುಗೆಯನ್ನು 3 ಬಾರಿ ಏರುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ದೆಹಲಿಯ ಜನರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಮಾಡಿದ ಕ್ರಾಂತಿಕಾರಕ ಬದಲಾವಣೆಗಳಿಂದ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ಸರ್ಕಾರ ವಿಶ್ವದರ್ಜೆಯ ಸೌಲಭ್ಯಗಳನ್ನು ತನ್ನ ಜನರಿಗೆ ಪರಿಚಯಿಸಿದೆ. 9 ನೇ ಸಂಸ್ಥಾಪನಾ ದಿನವನ್ನು ಬಿಬಿಎಂಪಿ ಅಧಿಕಾರ ಹಿಡಿಯುವುದರ ಮೂಲಕ ಆಚರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ತಮ್ಮ ಪ್ರಾಣದ ಹಂಗನ್ನು ತೊರೆದು ಲಾಕ್‌ಡೌನ್ ವೇಳೆ ದುಡಿದ ಕರುನಾಡಿನ ಹೆಮ್ಮೆಯ ಕೊರೊನಾ ಯೋಧರನ್ನು ಸನ್ಮಾನಿಸಲಾಯಿತು. ಕೊರೊನಾ ವಾರಿಯರ್ಸ್ ಗಳನ್ನು ಸನ್ಮಾನಿಸಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ವಾರಿಯರ್ಸ್ ಕೆಲಸವನ್ನು ಶ್ಲಾಘಿಸಿದರು.
ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ರಾಜ್ಯ ಕಾರ್ಯದರ್ಶಿ ಸಂಚಿತ್ ಸಹಾನಿ, ಸಹ ಸಂಚಾಲಕ ವಿಜಯ್ ಶರ್ಮ, ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಲಕ್ಷ್ಮಿಕಾಂತ್ ರಾವ್, ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ, ಮುಖ್ಯ ವಕ್ತಾರ ಶರತ್ ಖಾದ್ರಿ ಇದ್ದರು.
ಇದೇ ವೇಳೆ ಅರವಿಂದ ಕೇಜ್ರಿವಾಲ್ ಅವರ ರಾಜಕೀಯ ಜೀವನ ಆಧಾರಿತ "ಇನ್‌ಸಿಗ್ನಿಫಿಕೆಂಟ್ ಮ್ಯಾನ್" ಚಲನಚಿತ್ರ ಪ್ರದರ್ಶನ ಹಾಗೂ ಏಷ್ಯಾದ ಬಲಶಾಲಿ ವ್ಯಕ್ತಿ ಮನೋಜ್ ಚೋಪ್ರಾ ಅವರಿಂದ ಶಕ್ತಿ ಪ್ರದರ್ಶನ ಕಾರ್ಯಕ್ರಮ ನಡೆಸಲಾಯಿತು.