ಬೆಂಗಳೂರು: ಕೋವಿಡ್ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಮೇಲಾದ ಹಲ್ಲೆ ಖಂಡಿಸಿ ಬನ್ನೇರುಘಟ್ಟ ಫೋರ್ಟಿಸ್ ಆಸ್ಪತ್ರೆ ವೈದ್ಯರು, ನರ್ಸ್, ಸಿಬ್ಬಂದಿ ನಿನ್ನೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ಎದುರು ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಬಳಿಕ ಇಂತಹ ಪ್ರಕರಣಗಳು ಮರುಕಳಿಸದಂತೆ ಹಾಗೂ ವೈದ್ಯರಿಗೆ ರಕ್ಷಣೆ ನೀಡುವಂತೆ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಪೊಲೀಸರಿಗೆ ಮನವಿ ಪತ್ರ ಸಲ್ಲಿಸಿತು.
ಕೋವಿಡ್ ಸಂದರ್ಭದಲ್ಲಿ ವೈದ್ಯರು ತಮ್ಮ ಪ್ರಾಣ ಲೆಕ್ಕಿಸದೇ ಹಗಲಿರುಳು ಜನರಿಗೋಸ್ಕರ ದುಡಿಯುತ್ತಿದ್ದಾರೆ. ಅವರ ಮೇಲೆ ದೌರ್ಜನ್ಯವೆಸಗುವುದು ಹೀನ ಕೆಲಸ. ಪ್ರತಿಯೊಬ್ಬರು ಕೂಡ ವೈದ್ಯರ ಶ್ರಮವನ್ನು ಗೌರವಿಸಬೇಕು. ವೈದ್ಯರ ಮೇಲೆ ಹಲ್ಲೆ ಮಾಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಉಲ್ಲೇಖಿಸಲಾಯಿತು.
ಘಟನೆ:
ಮೇ 5ರಂದು ಸೋಂಕಿತರೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಜೂ. 3ರಂದು ಅವರಿಗೆ ಕೋವಿಡ್ ನೆಗೆಟಿವ್ ವರದಿ ಬಂದಿದೆ. ಆದರೂ ಸಹ ಅವರು ತೀವ್ರ ಶ್ವಾಸಕೋಶ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಕಾರಣ ಆ ರೋಗಿಯ ಸ್ಥಿತಿ ಚಿಂತಾಜನಕವಾಗಿತ್ತು. ಅವರಿಗೆ ಕೋವಿಡ್ ಅಲ್ಲದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ರೋಗಿ ಗುಣಮುಖರಾಗದ ಕಾರಣ ರೋಗಿಯ ಕುಟುಂಬದ ವ್ಯಕ್ತಿ ಫೋರ್ಟಿಸ್ ಆಸ್ಪತ್ರೆ ವೈದ್ಯ ಹಾಗೂ ನರ್ಸ್ ಮೇಲೆ ಹಲ್ಲೆ ನಡೆಸಿದ್ದಾರೆ. ವೈದ್ಯರ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಅಂಗಾಂಗ ಕಸಿ ಗರ್ಭಿಣಿಗೆ ಯಶಸ್ವಿ ಹೆರಿಗೆ... ಇದು ದೇಶದಲ್ಲೇ ಮೊದಲ ಪ್ರಕರಣ!
ಹಲ್ಲೆ ಮಾಡಿದ ವ್ಯಕ್ತಿ ಮೇಲೆ ಎಫ್‌ಐಆರ್ ದಾಖಲಿಸಿ ಬಂಧಿಸಲಾಗಿತ್ತು. ಆದರೆ, ಅದೇ ವ್ಯಕ್ತಿ ಮರುದಿನ ಜೈಲಿನಿಂದ ಬೇಲ್ ಪಡೆದು ಬಿಡುಗಡೆ ಹೊಂದಿದ್ದಾನೆ. ಇಂತಹ ಪ್ರಕರಣಗಳು ಹೆಚ್ಚುತ್ತಿದ್ದರೆ ಚಿಕಿತ್ಸೆ ನೀಡುವ ವೈದ್ಯರಿಗೆ ರಕ್ಷಣೆ ಮಾಡುವವರು ಯಾರು. ಆ ವ್ಯಕ್ತಿಯ ಮೇಲೆ ಪೊಲೀಸರು ಗಂಭೀರವಾಗಿ ಕ್ರಮ ಕೈಗೊಂಡು ಬೇಲ್ ರಹಿತ ಬಂಧಿಸಬೇಕು ಎಂದು ವೈದ್ಯರ ತಂಡ ಮನವಿ ಪತ್ರ ಸಲ್ಲಿಸಿತು.