ಬೆಂಗಳೂರು : ಅನಾರೋಗ್ಯದ ನಡುವೆಯೂ ಸಂಸತ್ ಕಲಾಪದಲ್ಲಿ ಭಾಗವಹಿಸಲು ರಾಜ್ಯಸಭೆ ಸದಸ್ಯರೂ ಆಗಿರುವ ಮಾಜಿ ಪ್ರಧಾನಮಂತ್ರಿ ಹೆಚ್ಡಿ ದೇವೇಗೌಡರು ಇಂದು ದೆಹಲಿಗೆ ತೆರಳಲಿದ್ದಾರೆ. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಇಂದು ಬೆಳಗ್ಗೆ 11.45 ಕ್ಕೆ ಗೌಡರು ದೆಹಲಿಗೆ ತೆರಳಲಿದ್ದು, ಸಂಜೆ 4ಕ್ಕೆ ರಾಜ್ಯಸಭೆ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯಸಭೆ ಅಧಿವೇಶನ ಬಳಿಕ ಸಂಜೆ 6.45 ಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಲಿರುವ ದೇವೇಗೌಡರು ಸಮಾಲೋಚನೆ ನಡೆಸಲಿದ್ದಾರೆ. ಇಬ್ಬರು ನಾಯಕರ ಭೇಟಿ ಕುತೂಹಲ ಮೂಡಿಸಿದೆ. ಸೊಂಟದ ನೋವಿನ ಕಾರಣದಿಂದ ರಾಜ್ಯಸಭೆ ಕಲಾಪದಲ್ಲಿ ಭಾಗವಹಿಸಲು ಆಗಿರಲಿಲ್ಲ. ದೇವೇಗೌಡರೇ ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿದ್ದರು.
ಸೊಂಟದ ನೋವಿನ ಕಾರಣ ಮೊನ್ನೆ ನಡೆದ ಜೆಡಿಎಸ್ ಸಭೆಯಲ್ಲೂ ಬಹಳ ಹೊತ್ತು ಕೂರಲು ತಮ್ಮಿಂದ ಆಗಲಿಲ್ಲ. ಹತ್ತು ನಿಮಿಷವಷ್ಟೇ ಆ ಸಭೆಗೆ ಹಾಜರಾಗಿ ನಂತರ ವೈದ್ಯರ ಬಳಿ ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿ ವಿಶ್ರಾಂತಿ ಪಡೆಯುತ್ತಿರುವುದಾಗಿ ತಿಳಿಸಿದ್ದರು. ನೋವು ಕಡಿಮೆಯಾದರೆ ಬುಧವಾರ ಕಲಾಪದಲ್ಲಿ ಭಾಗಿಯಾಗುವುದಾಗಿ ದೇವೇಗೌಡರು ಹೇಳಿದ್ದರು. ಹಾಗಾಗಿ, ಇಂದು ಗೌಡರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಮನೆಯಲ್ಲಿಯೇ ಕಲಾಪ ವೀಕ್ಷಣೆ: ಇದರ ನಡುವೆ ಮಾಜಿ ಪ್ರಧಾನಿಗಳು ಮನೆಯಲ್ಲಿಯೇ ರಾಜ್ಯಸಭೆ ಕಲಾಪದ ನೇರ ಪ್ರಸಾರ ವೀಕ್ಷಿಸಿದರು. ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಉಭಯ ಸದನಗಳ ಕಲಾಪದಲ್ಲಿ ದೆಹಲಿ ಸೇವೆಗಳ ಮಸೂದೆ ಹಾಗೂ ಮಣಿಪುರ ಹಿಂಸಾಚಾರ ಹಿನ್ನೆಲೆ ವ್ಯರ್ಥವಾಗುತ್ತಿದೆ ಎಂದು ಹೇಳಿದ್ದರು.
ಬಿಜೆಪಿಯೊಂದಿಗೆ ಮೈತ್ರಿ ಇಲ್ಲ: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್.ಡಿ.ದೇವೇಗೌಡ, ಯಾವ ಮೈತ್ರಿಕೂಟದ ಜೊತೆಯೂ ಸೇರುವ ಪ್ರಶ್ನೆಯೇ ಇಲ್ಲ. ನಮ್ಮದು ಪ್ರಾದೇಶಿಕ ಪಕ್ಷ. ಈ ಪ್ರಾದೇಶಿಕ ಪಕ್ಷ ಉಳಿಸುವ ನಿಟ್ಟಿನಲ್ಲಿ ಚರ್ಚೆ ಆಗಿದೆ. ನಾನು ಎಲ್ಲರನ್ನೂ ಭೇಟಿ ಮಾಡಿ ಮುಂದೆ ಯಾವ ಮಾರ್ಗದಲ್ಲಿ ಹೋಗಬೇಕು ಎನ್ನುವ ಸಲಹೆಯನ್ನು ಶಾಸಕರಿಗೆ ನೀಡಿದ್ದೇನೆ ಎಂದು ಜುಲೈ 21ರಂದು ಹೇಳಿದ್ದರು.
ಒಂದು ಕಡೆ ಎನ್ಡಿಎ, ಇನ್ನೊಂದೆಡೆ ಇಂಡಿಯಾ ಹಾಗಾಗಿ, ನನಗಿರುವ ಅನುಭವವನ್ನು ಅವರ ಬಳಿ ಹಂಚಿಕೊಂಡಿದ್ದೇನೆ. ಹೆಚ್.ಡಿ.ಕುಮಾರಸ್ವಾಮಿ ಪಕ್ಷದ ನಾಯಕರಾಗಿದ್ದಾರೆ. ಅವರು ಪಕ್ಷದ ಹೊಣೆ ಹೊತ್ತು ಕೆಲಸ ಮಾಡುತ್ತಿದ್ದಾರೆ. ನನ್ನ ಅನುಭವವನ್ನು ಅವರಿಗೂ ಹೇಳಿದ್ದೇನೆ. ಇದರ ಜೊತೆಗೆ ಈಗಲೂ ಸಲಹೆ ನೀಡಲು ಸಿದ್ದನಿದ್ದೇನೆ ಎಂದು ಹೇಳಿದ್ದರು.
ಓದಿ: ಅನಾರೋಗ್ಯದಿಂದ ರಾಜ್ಯಸಭೆ ಕಲಾಪಕ್ಕೆ ಹಾಜರಾಗಿಲ್ಲ: ಹೆಚ್.ಡಿ.ದೇವೇಗೌಡರು