ಬೆಂಗಳೂರು : ಇದೇ ಮೊದಲ ಬಾರಿಗೆ ಸಂಸತ್ತಿನ ಮುಂಗಾರು ಅಧಿವೇಶನ ನಾಳೆ ಭಾನುವಾರವೂ ನಡೆಯಲಿದೆ. ರಾಜ್ಯಸಭೆಗೆ ಆಯ್ಕೆಯಾಗಿರುವ ನೂತನ ಸದಸ್ಯ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ದೆಹಲಿಗೆ ಇಂದು ಪ್ರಯಾಣ ಬೆಳೆಸಿರುವ ದೇವೇಗೌಡರು, ನಾಳೆ ಬೆಳಗ್ಗೆ ರಾಜ್ಯಸಭೆಯಲ್ಲಿ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯಸಭೆಯ ಸಭಾಪತಿ ಡಾ. ಎಂ ವೆಂಕಯ್ಯ ನಾಯ್ಡು ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ಸಂಸತ್ ಅಧಿವೇಶನ ಅವಧಿ ಕಡಿಮೆ ಇರುವ ಕಾರಣದಿಂದಾಗಿ ಭಾನುವಾರವೂ ರಾಜ್ಯಸಭೆ ನಡೆಯಲಿದೆ. ಹಾಗಾಗಿ, ನಾಳೆ ದೇವೇಗೌಡರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ರಾಜ್ಯಸಭೆಯಲ್ಲಿ ತೆರವಾದ ನಾಲ್ಕು ಸ್ಥಾನಗಳಿಗಾಗಿ ಜೂನ್ 12ರಂದು ನಡೆದ ಚುನಾವಣೆಯಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಅದೇ ರೀತಿ ಕಾಂಗ್ರೆಸ್ನಿಂದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯಿಂದ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರೆ, ಎರಡು ದಿನಗಳ ಹಿಂದೆಯಷ್ಟೇ ಕೋವಿಡ್ನಿಂದಾಗಿ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ನಿಧನರಾದರು.
ಬಿಜೆಪಿಯಿಂದ ಈರಣ್ಣ ಕಡಾಡಿ, ಅಶೋಕ್ ಗಸ್ತಿ, ಕಾಂಗ್ರೆಸ್ ಪಕ್ಷದ ಮಲ್ಲಿಕಾರ್ಜುನ ಖರ್ಗೆ ಸೇರಿ ವಿವಿಧ ರಾಜ್ಯದ 45 ಮಂದಿ ಸದಸ್ಯರು ಜುಲೈ 22ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಕೆಲ ಕಾರಣಾಂತರದಿಂದ ದೇವೇಗೌಡರು ದೆಹಲಿಗೆ ತೆರಳಲು ಸಾಧ್ಯವಾಗಿರಲಿಲ್ಲ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು 24 ವರ್ಷಗಳ ಬಳಿಕ 2ನೇ ಬಾರಿ ರಾಜ್ಯಸಭೆ ಸದಸ್ಯರಾಗುತ್ತಿದ್ದಾರೆ. 1996ರ ಜೂನ್ನಿಂದ 1997ರ ಏಪ್ರಿಲ್‍ವರೆಗೆ ಅವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.