ಬೆಂಗಳೂರು: ನೈಸ್ ಸಂಸ್ಥೆಯ ವಿರುದ್ಧ ಮತ್ತೆ ತೊಡೆ ತಟ್ಟಿ ನಿಂತಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ, ನೈಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪಕ್ಷದ ಕಚೇರಿ ಜೆ ಪಿ ಭವನದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನೈಸ್ ಸಂಸ್ಥೆ ಟೋಲ್ ಹಣವನ್ನು ಸರ್ಕಾರದ ಅನುಮತಿ ಇಲ್ಲದೆ ಹೆಚ್ಚಳ ಮಾಡಿದೆ. ನೈಸ್ ಸಂಸ್ಥೆಯು ಸರ್ಕಾರದ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿದೆ. ನೈಸ್ ಅಕ್ರಮದ ಬಗ್ಗೆ ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದೇನೆ ಎಂದರು.
41 ಎಕರೆ ಜಾಗದ ಸೇಲ್ ಡೀಡ್ ರದ್ದುಗೊಳಿಸುವಂತೆ ಪತ್ರ : ನೈಸ್ ಸಂಸ್ಥೆಗೆ ಕೊಮ್ಮನಗಟ್ಟದ ಬಳಿ ನೀಡಿರೋ 41 ಎಕರೆ ಜಾಗದ ಸೇಲ್ ಡೀಡ್ ರದ್ದುಗೊಳಿಸುವಂತೆ ಪತ್ರ ಬರೆದಿದ್ದೇನೆ. ಕೊಮ್ಮಘಟ್ಟದ ಗ್ರಾಮದಲ್ಲಿನ 41 ಎಕರೆ ಜಮೀನಿನಲ್ಲಿ ಟೋಲ್ ರಸ್ತೆ ಮಾಡುವ ಬದಲು ವಸತಿ ಯೋಜನೆ ಪ್ರಾರಂಭಿಸಲು ಅನುಮತಿ ಕೋರಿ ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಏರಿಯಾ ಪ್ಲಾನಿಂಗ್ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿಗೆ ಈ ವಸತಿ ಯೋಜನೆ ವಿರುದ್ಧವಾಗಿದ್ದು, ಅನುಮತಿ ನೀಡದಂತೆ ಹಾಗೂ ಆ ಜಮೀನಿನ ಕ್ರಯ ಪತ್ರವನ್ನು ರದ್ದುಗೊಳಿಸಲು ಮನವಿ ಮಾಡಿದ್ದೇನೆ ಎಂದು ದೇವೇಗೌಡ ಹೇಳಿದರು.
ನಾನು ಒಳ್ಳೆ ಉದ್ದೇಶಕ್ಕಾಗಿ ಈ ಯೋಜನೆ ತಂದೆ : ವಿಧಾನ ಪರಿಷತ್ ನಲ್ಲಿ ಮೊನ್ನೆ ಈ ವಿಷಯ ಚರ್ಚೆ ಆಯ್ತು. ಆದ್ರೆ ಯಾವುದೇ ಸಚಿವರು ಸರಿಯಾಗಿ ಉತ್ತರ ಕೊಟ್ಟಿಲ್ಲ. ನಾನು ಅನೇಕ ಪತ್ರಗಳನ್ನು ಸಿಎಂಗೆ ಮತ್ತು ಸಿಎಸ್ ಗೆ, ಕೈಗಾರಿಕೆ ಇಲಾಖೆ ಕಾರ್ಯದರ್ಶಿಗೂ ಕೂಡ ಪತ್ರ ಬರೆದಿದ್ದೇನೆ. ಸರ್ಕಾರ ನೈಸ್ ವಿಚಾರವಾಗಿ ಕಮಿಟಿ ಮಾಡಿತ್ತು. ಕಮಿಟಿಯನ್ನ ಪದೇ ಪದೆ ಬದಲಾವಣೆ ಮಾಡುತ್ತಾ ಹೋದರು. ಕಾನೂನು ಸಚಿವ ಮಾಧುಸ್ವಾಮಿ ಅವರು ಈ ಕಂಪನಿ ವ್ಯವಹಾರಗಳು ಸರಿ ಇಲ್ಲ ಅಂತ ಹೇಳಿದ್ದಾರೆ. ಆಗ ಅವರಿಗೆ 5 ಲಕ್ಷ ಮಾತ್ರ ಪೆನಾಲ್ಟಿ ಹಾಕಿದ್ದರು. ಈಗ ಮಾಧುಸ್ವಾಮಿ ಅವರನ್ನ ಕಮಿಟಿಯಿಂದ ಕೈಬಿಟ್ಟಿದ್ದಾರೆ. ನಾನು ಒಳ್ಳೆ ಉದ್ದೇಶಕ್ಕಾಗಿ ಯೋಜನೆ ತಂದೆ. ಆದ್ರೆ ನಂತರ ಇದರಲ್ಲಿ ಅನೇಕ ನಿಯಮಗಳನ್ನೂ ಬದಲಾವಣೆ ಮಾಡಿದ್ದಾರೆ ಎಂದು ಹೆಚ್ಡಿಡಿ ತಿಳಿಸಿದರು.
ಸದನ ಸಮಿತಿಯ ವರದಿ ಮೀರಿ ಟೋಲ್ ಸಂಗ್ರಹ : ನೈಸ್ ಬಗ್ಗೆ ಸದನ ಸಮಿತಿ ಮಾಡಿದ್ದರು. ಸದನ ಸಮಿತಿ ವರದಿ ಕೊಟ್ಟಿತ್ತು. ರಸ್ತೆ ಮಾಡದೇ ಟೋಲ್ ಸಂಗ್ರಹಿಸುತ್ತಿದ್ದಾರೆ. ಮೈಸೂರು ರೋಡ್ ಮಾಡಿದ ಮೇಲೆ ಟೋಲ್ ಸಂಗ್ರಹಿಸಬೇಕು ಅಂತ ಇತ್ತು. ಆದರೆ ಈಗ ಆಗುತ್ತಿರುವುದೇ ಬೇರೆ. ಸದನ ಸಮಿತಿ ಟೋಲ್ ಸಂಗ್ರಹ ರದ್ದು ಮಾಡಿ ಅಂತ ವರದಿ ಕೊಟ್ಟಿತ್ತು. ಆದರೆ, 2016 ರಲ್ಲಿ ನೈಸ್ ಸಂಸ್ಥೆಯವರು ಹೈಕೋರ್ಟ್ ನಲ್ಲಿ ಸ್ಟೇ ತೆಗೆದುಕೊಳ್ಳತ್ತಾರೆ. ಸದನ ಸಮಿತಿಯ ವರದಿ ಮೀರಿ ಟೋಲ್ ಸಂಗ್ರಹ ಆಗಿದೆ. 2016 ರಿಂದ 2022 ರವರೆಗೆ ಟೋಲ್ ಸಂಗ್ರಹ ಮಾಡಿದ್ದಾರೆ. ನಿತ್ಯ 2-3 ಕೋಟಿ ಸಂಗ್ರಹ ಆಗುತ್ತದೆ. ಯಾರಾದರು ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾರಾ? ಎಂದು ದೇವೇಗೌಡ ಪ್ರಶ್ನಿಸಿದರು.
ಇದು ನನ್ನ ಕನಸಿನ ಪ್ರಾಜೆಕ್ಟ್ ಆಗಿತ್ತು : ನಮ್ಮ KIADB ಜಾಗವನ್ನು METRO ಗೆ 14 ಕೋಟಿಗೆ ನೈಸ್ ಸಂಸ್ಥೆ ಮಾರಾಟ ಮಾಡಿದೆ. ಈಗ ಮತ್ತೆ METRO ಗೆ ಸುಮಾರು 100 ಕೋಟಿಗೆ ಮಾರಾಟ ಮಾಡಿ ದುಡ್ಡು ಮಾಡಲು ನೈಸ್ ಸಂಸ್ಥೆ ಹೊರಟಿದೆ. ತುಂಬಾ ಆಸೆ ಇಟ್ಟು ಈ ಪ್ರಾಜೆಕ್ಟ್ ಮಾಡಿದ್ದೆ. ಆದ್ರೆ ರೈತರಿಗೆ ನೈಸ್ ಸಂಸ್ಥೆ ಸರಿಯಾಗಿ ಪರಿಹಾರವನ್ನೇ ನೀಡಲಿಲ್ಲ. ಇದು ನನ್ನ ಕನಸಿನ ಪ್ರಾಜೆಕ್ಟ್ ಆಗಿತ್ತು. ಆದ್ರೆ ಈ ಕಂಪನಿ ರೈತರಿಗೆ ಅನ್ಯಾಯ ಮಾಡಿತ್ತು. ಸರ್ಕಾರಿ ಜಮೀನನ್ನ ಅಡ ಇಟ್ಟು ಸಾಲ ಪಡೆದಿದ್ದಾರೆ. ದೇಶದಲ್ಲಿ ಉತ್ತಮ ರಸ್ತೆ ಮಾಡಲು ಈ ಪ್ರಾಜೆಕ್ಟ್ ಆಗಲೇ ಓಕೆ ಮಾಡಿದ್ದೆ. ಆದರೆ ಇವತ್ತು ಎಲ್ಲಾ ಉಲ್ಟಾ ಆಗಿದೆ. ಮನಸ್ಸಿಗೆ ಬಹಳ ನೋವಾಗುತ್ತದೆ. ನೈಸ್ ಅಕ್ರಮದ ಬಗ್ಗೆ ಅನೇಕ ಪತ್ರಗಳನ್ನು ಬರೆದಿದ್ದೇನೆ. ಸರ್ಕಾರ ಏನು ಕ್ರಮ ತೆಗೆದುಕೊಂಡಿಲ್ಲ. ಹೈಕೋರ್ಟ್ ಗೆ ಸರ್ಕಾರ ಅರ್ಜಿ ಹಾಕಬೇಕಿತ್ತು. ಇಷ್ಟು ಅಕ್ರಮ ಮಾಡಿದ್ದಾರೆ ಅಂತ ಅರ್ಜಿ ಹಾಕಬೇಕಿತ್ತು. ಆದರೆ ಯಾವ ಸರ್ಕಾರವೂ ಈ ಕೆಲಸವನ್ನ ಮಾಡಲಿಲ್ಲ ಎಂದು ಆರೋಪಿಸಿದರು.
ಆಗ ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಕೂಡ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡು ಅಂತ ಹೇಳಿದ್ದೆ. ಆದರೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿರುವುದರಿಂದ ಅದರ ಅನುಷ್ಠಾನ ಕಷ್ಟ ಸಾಧ್ಯ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದರು ಎಂದು ಇದೇ ವೇಳೆ ಜೆಡಿಎಸ್ ವರಿಷ್ಠ ದೇವೇಗೌಡರು ತಿಳಿಸಿದರು.
ನನ್ನ ಮೇಲೆ ಕೇಸ್ ಇದೆ : ಸಿದ್ದರಾಮಯ್ಯ, ಯಡಿಯೂರಪ್ಪ, ಅವರಿಗೂ ಪತ್ರ ಬರೆದಿದ್ದೆ. ಈಗ ಬೊಮ್ಮಾಯಿ ಅವರ ಸರ್ಕಾರಕ್ಕೆ ಬಹುಮತ ಇದೆ. ಈಗಲಾದರೂ ಕ್ರಮ ತೆಗೆದುಕೊಳ್ಳಲಿ. ಭೂಮಿ ಕಳೆದುಕೊಂಡವರು ನನ್ನ ಬಳಿ ಬಂದು ನೋವು ತೋಡಿಕೊಂಡಿದ್ದಾರೆ. ಇದು ಪ್ರಾರಂಭ. ಮುಂದೆ ಇನ್ನು ಹೋರಾಟ ಇದೆ. ನಾನು ಕಣ್ಣು ಮುಚ್ಚಿಕೊಂಡು ಈ ಪ್ರಾಜೆಕ್ಟ್ ಮಾಡಿಲ್ಲ. ನಿಯಮ ಬದ್ಧವಾಗಿ ಮಾಡಿದ್ದೆ. ನನ್ನ ಮೇಲೆ ಎರಡು ಕೋಟಿ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಅದಕ್ಕೆ ಕೋರ್ಟ್ ಸ್ಟೇ ಕೊಟ್ಟಿದೆ. ನನ್ನ ಮೇಲೆ ಕೇಸ್ ಇದೆ. ಸರ್ಕಾರ ಈಗಲಾದರು ಕ್ರಮ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದರು.
ಎಲ್ಲಾ ಸಿಎಂಗಳಿಗೆ ಪತ್ರ ಬರೆದಿದ್ದೇನೆ. ಆದ್ರೆ ಏನು ಪ್ರಯೋಜನ ಆಗಿಲ್ಲ. ಲೋಕೋಪಯೋಗಿ ಇಲಾಖೆ ಸಚಿವರು ಮಾತ್ರ ನನ್ನ ಪತ್ರಕ್ಕೆ ಉತ್ತರ ಬರೆದಿದ್ದಾರೆ. ಈಗಿನ ಸಿಎಂ ಪಾಪ ತುಂಬಾ ಬ್ಯುಸಿ ಇದ್ದಾರೆ. ಅದಕ್ಕೆ ಸಂಬಂಧಪಟ್ಟ ಸಚಿವರಿಗೆ ಕೆಲಸ ಮಾಡಲು ಹೇಳಲಿ ಎಂದು ನೈಸ್ ವಿರುದ್ಧ ಕ್ರಮಕ್ಕೆ ಸರ್ಕಾರವನ್ನ ಒತ್ತಾಯಿಸುವುದಾಗಿ ತಿಳಿಸಿದರು.