ಬೆಂಗಳೂರು: ಒಬ್ಬ ವ್ಯಕ್ತಿ ಎಷ್ಟೇ ಪ್ರಭಾವಿ ಆಗಿದ್ದರೂ ಸಹ ಜಾತಿ ಹೆಸರಿನಲ್ಲಿ ರಾಜಕೀಯದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಟಾಂಗ್ ಕೊಟ್ಟಿದ್ದಾರೆ.
ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ಜಾತಿಯಿಂದ ಇಡೀ ಕರ್ನಾಟಕವನ್ನು ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ. ರಾಜಕಾರಣದಲ್ಲಿ ನನಗೂ ಸಾಕಷ್ಟು ಅನುಭವ ಇದೆ. ಆದರೆ ನಾನು ಈಗ ಯಾವ ವಿಚಾರವನ್ನೂ ಮಾತಾನಾಡಲು ಹೋಗುವುದಿಲ್ಲ. ಅಧಿಕಾರದಲ್ಲಿದ್ದವರು ಮಾತನಾಡಲಿ. ಆದರೆ ಅಂತಿಮವಾಗಿ ಮತದಾರರು ತೀರ್ಮಾನ ಮಾಡುತ್ತಾರೆ ಎಂದರು.
ಜಾತ್ಯಾತೀತ ಜನತಾದಳ ಒಂದು ಪ್ರಬಲ ಪ್ರಾದೇಶಿಕ ಪಕ್ಷ. ಯಾರು ಬಂದರೂ ಇದನ್ನು ತುಳಿಯಲು ಸಾಧ್ಯವಿಲ್ಲ. ಜೆಡಿಎಸ್ ಕುಟುಂಬ ರಾಜಕಾರಣದ ಪಕ್ಷವಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ಈ ಪಕ್ಷ ಬಡವರ ಪರ, ರೈತರು ಮತ್ತು ಅತ್ಯಂತ ಕೆಳ ವರ್ಗದ ಜನ ಇರುವವರ ಪಕ್ಷ ಎಂದಿದ್ದಾರೆ.