ಬೆಂಗಳೂರು : ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು 88 ವಸಂತಗಳನ್ನು ಪೂರೈಸಿ ಇಂದು 89 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಸಂಕಷ್ಟದ ಹಿನ್ನೆಲೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳದೆ ಪದ್ಮನಾಭನಗರದ ನಿವಾಸದಲ್ಲಿ ಕುಟುಂಬದ ಸದಸ್ಯರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಪತ್ನಿ ಚನ್ನಮ್ಮ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಗೌಡರ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
ರಾಜ್ಯದ ಜನರು ಮಹಾಮಾರಿ ಕೊರೊನಾ ಸಂಕಷ್ಟದಲ್ಲಿರುವಾಗ ಸಡಗರ, ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸುವುದು ಬೇಡ ಎಂದು ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಮೊನ್ನೆಯಷ್ಟೆ ದೇವೇಗೌಡರು ಮನವಿ ಮಾಡಿದ್ದರು.
ಹುಟ್ಟು ಹಬ್ಬದಂದು ಹಾರ, ತುರಾಯಿ, ಕೇಕ್, ಸಿಹಿಗಾಗಿ ಅನಗತ್ಯ ದುಂದುವೆಚ್ಚ ಮಾಡುವ ಬದಲಿಗೆ ನಿಮ್ಮ ನಿಮ್ಮ ಭಾಗದ ಕೊರೊನಾ ಸಂತ್ರಸ್ತರಿಗೆ ನೆರವಿನ ರೂಪದಲ್ಲಿ ಅವರ ಅಗತ್ಯಗಳ ಪೂರೈಕೆಗೆ ಬಳಸಿದರೆ ಅದು ನಿಜಕ್ಕೂ ಸದುಪಯೋಗವಾಗಲಿದೆ.
ಇಂತಹ ಕಾರ್ಯವನ್ನು ದೇವರು ಮೆಚ್ಚುತ್ತಾನೆ. ಅಭಿಮಾನಿಗಳ ಇಂತಹ ಸೇವಾ ಕಾರ್ಯ ನನಗೂ ಸಂತೋಷ ನೀಡುತ್ತದೆ ಎಂದು ಗೌಡರು ಹೇಳಿದ್ದರು.
ಗೌಡರ ಆಶಯದಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಅಭಿಮಾನಿಗಳು ಕೋವಿಡ್ ಸಂಕಷ್ಟದಲ್ಲಿರುವವರಿಗೆ ಆಹಾರ, ಮಾಸ್ಕ್, ಸ್ಯಾನಿಟೈಸರ್ ಮೊದಲಾದ ವಸ್ತುಗಳನ್ನು ನೀಡಿದ್ದಾರೆ.
ಪ್ರಧಾನಿ ಶುಭಾಶಯ : ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ದೇವೇಗೌಡರ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ. ನಂತರ ಟ್ವೀಟ್ ಮೂಲಕ ದೇವೇಗೌಡರು ಸಹ ಪ್ರಧಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಹೆಚ್‌ಡಿಕೆ ಶುಭಾಶಯ : ಶೂನ್ಯದಿಂದ ಮೇಲೆದ್ದು ಬರುವ, ಕನ್ನಡದ ನೆಲದಿಂದ ವಿಶಾಲ ರಾಷ್ಟ್ರ ಆಳುವ, ಕನ್ನಡ, ಕರ್ನಾಟಕಕ್ಕಾಗಿ ಬೆಟ್ಟದಂತೆ ನಿಲ್ಲುವ ಕರ್ನಾಟಕದ ವೀರ ಪರಂಪರೆಗೆ ಹೆಗ್ಗುರುತಾಗಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರಿಗೆ ಟ್ವೀಟ್ ಮೂಲಕ ಜನ್ಮದಿನದ ಶುಭಾಶಯವನ್ನು ಕೋರಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ನಿಮ್ಮ ಅಪಾರ ಅನುಭವ ನಮಗೆ ಸದಾ ದಾರಿ ದೀಪ. ನಿಮ್ಮ ಅಚಲ ಆತ್ಮವಿಶ್ವಾಸ ನಮಗೆ ಪ್ರೇರಣದಾಯಕ ಎಂದಿದ್ದಾರೆ.