ಬೆಂಗಳೂರು: ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾ ಮಾಡಿ ಆದೇಶಿಸಿದೆ.
ಪ್ರಕರದಲ್ಲಿ ಜಾಮೀನು ನೀಡುವಂತೆ ಕೋರಿ ಆರೋಪಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯ, ಅರ್ಜಿ ವಜಾ ಮಾಡಿದೆ.
ವಿನಯ್ ಜಾಮೀನು ಅರ್ಜಿಗೆ ಅಕ್ಷೇಪಣೆ ಸಲ್ಲಿಸಿದ್ದ ಸಿಬಿಐ, ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಪ್ರಮುಖ ಆರೋಪಿಯಾಗಿದ್ದಾರೆ. ರಾಜಕೀಯ ಕಾರಣಗಳಿಗಾಗಿ ಹತ್ಯೆ ನಡೆದಿದೆ. ಜಿಮ್ನಿಂದ ಹೊರ ಬರುವ ವೇಳೆ ಯೋಗೇಶ್ ಗೌಡ ಹತ್ಯೆ ನಡೆದಿತ್ತು. ಈ ಸಂಬಂಧ ಪ್ರಕರಣ ದಾಖಲಾದ ಬಳಿಕ ಕೊಲೆ ಮಾಡಿರದ ಆರೋಪಿಗಳು ಬಂದು ತಾವೇ ಕೊಲೆ ಮಾಡಿರುವುದಾಗಿ ಶರಣಾಗಿದ್ದರು.
ಕೊಲೆ ನೋಡಿದ್ದ ಪ್ರತ್ಯಕ್ಷ ಸಾಕ್ಷಿಗಳನ್ನು ಅರ್ಜಿದಾರರು ಬೆದರಿಸಿ ಪ್ರಕರಣದಿಂದ ದೂರ ಉಳಿಯುವಂತೆ ನೋಡಿಕೊಂಡಿದ್ದರು. ಇದಕ್ಕೆ ಸ್ಥಳೀಯ ಪೊಲೀಸರು ಹಾಗೂ ವಿನಯ್ ಸಂಬಂಧಿಯೊಬ್ಬರು ನೆರವು ನೀಡಿದ್ದರು. ಈ ಎಲ್ಲ ಅಂಶಗಳು ಸಿಬಿಐ ತನಿಖೆ ವೇಳೆ ಪತ್ತೆಯಾಗಿವೆ ಎಂದು ಸಿಬಿಐ ಆಕ್ಷೇಪಣೆ ಸಲ್ಲಿಸಿತ್ತು. ಸಿಬಿಐ ಪರ ವಿಶೇಷ ಅಭಿಯೋಜಕ ಪಿ.ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ಕೋರ್ಟ್ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು ನೀಡಲು ನಿರಾಕರಿಸಿದೆ.
ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಳೆದ ನವೆಂಬರ್ 5ರಂದು ಬಂಧನಕ್ಕೆ ಒಳಗಾಗಿರುವ ವಿನಯ್ ಕುಲಕರ್ಣಿ ಮೊದಲಿಗೆ ಜಾಮೀನು ಕೋರಿ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಜಾಮೀನು ಸಿಗದೆ ಹಿನ್ನೆಲೆಯಲ್ಲಿ ಧಾರವಾಡ ಹೈಕೋರ್ಟ್ ಪೀಠದಲ್ಲಿಯೂ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಕೂಡ ಜಾಮೀನು ನಿರಾಕರಿಸಿತ್ತು. ಆ ಬಳಿಕ ಪ್ರಕರಣ ನಿಯಮಾನುಸಾರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು.
ಪ್ರಕರಣ ವರ್ಗಾವಣೆಯಾಗುತ್ತಲೇ ಮೂರನೇ ಬಾರಿ ಜಾಮೀನು ಕೋರಿ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಗಂಭೀರತೆ ಹಾಗೂ ಸಿಬಿಐ ಆಕ್ಷೇಪಣೆಗಳನ್ನು ಪುರಸ್ಕರಿಸಿರುವ ನ್ಯಾಯಾಲಯ, ಜಾಮೀನು ತಿರಸ್ಕರಿಸಿದೆ. ಕೊಲೆಗೆ ಸುಪಾರಿ ನೀಡಿದ ಹಾಗೂ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಗಂಭೀರ ಆರೋಪದಡಿ ಸಿಬಿಐ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದ ವಿನಯ್ ಕಳೆದ 5 ತಿಂಗಳಿಂದ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ.