ಬೆಂಗಳೂರು: ಮಳೆ ಕೊರತೆಯಿಂದಾಗಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಲಿದ್ದು, ಈಗಾಗಲೇ ನೀರಿನ ಕೊರತೆ ನೀಗಿಸಲು ಕೈಗೊಳ್ಳಬಹುದಾದ ಕ್ರಮಗಳ ನೀಲನಕ್ಷೆ ಸಿದ್ಧಪಡಿಸಿಕೊಳ್ಳಬೇಕೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮಾಜಿ ಸಚಿವ ಸುರೇಶ್ ಕುಮಾರ್ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಹಿಂದೆಲ್ಲ ಮಾಡಿದಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಎಲ್ಲಾ ಖಾಸಗಿ ಟ್ಯಾಂಕರ್‌ಗಳನ್ನು ಸರ್ಕಾರವೇ ತೆಗೆದುಕೊಳ್ಳಬೇಕು. ವಾಣಿಜ್ಯ ಉದ್ದೇಶಗಳಿಗಾಗಿ ಉಪಯೋಗಿಸುತ್ತಿರುವ ಖಾಸಗಿ ಬೋರ್‌ವೆಲ್‌ಗಳನ್ನು ಬೆಂಗಳೂರು ನಾಗರಿಕರ ಉಪಯೋಗಕ್ಕಾಗಿ ಸರ್ಕಾರ ಮುಂದಿನ 9 ತಿಂಗಳ ಮಟ್ಟಿಗೆ ವಶಪಡಿಸಿಕೊಳ್ಳಬೇಕು.
ಸೋಮವಾರ ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿರುವುದು ಅತ್ಯಂತ ವಿಷಾದನೀಯ. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 2,600 ಕ್ಯೂಸೆಕ್ ನೀರು ಹರಿಸುವಂತೆ ನಿಯಂತ್ರಣ ಸಮಿತಿ ರಾಜ್ಯಕ್ಕೆ ಸೂಚನೆ ನೀಡಿ, ಮತ್ತೊಂದು ದೊಡ್ಡ ಶಾಕ್ ನೀಡಿದೆ. ರಾಜ್ಯದಲ್ಲಿ ಮುಂಗಾರು ತೀವ್ರವಾಗಿ ಕೈಕೊಟ್ಟ ಕಾರಣ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿರುವ ಜಲಾಶಯಗಳಲ್ಲಿ ಕಳೆದ ವರ್ಷದ ಮಟ್ಟಕ್ಕಿಂತ ಶೇ 50ರಷ್ಟು ನೀರಿನ ಮಟ್ಟ ಕಡಿಮೆ ಇದೆ. ಹೀಗಿರುವಾಗ ನಿಯಂತ್ರಣ ಸಮಿತಿಯ ಈ ಆದೇಶ ಕುಡಿಯುವ ನೀರಿನ ಸರಬರಾಜಿಗೆ ವಿಶೇಷವಾಗಿ ಬೆಂಗಳೂರು ನಗರದ ನಾಗರಿಕರಿಗೆ ದೊಡ್ಡ ಆತಂಕ ತಂದೊಡ್ಡಿದೆ. ಈ ಸಮಯದಲ್ಲಿ ರಾಜ್ಯ ಸರ್ಕಾರ ತುರ್ತು ಕಾರ್ಯಗಳನ್ನು ಕೈಗೊಳ್ಳಬೇಕು.
ಕೂಡಲೇ ಬೆಂಗಳೂರು ನಗರದ ಶಾಸಕರಿಗೆ ಕುಡಿಯುವ ನೀರಿನ ಸರಬರಾಜಿನ ಪರಿಸ್ಥಿತಿ ಕುರಿತು ಸ್ಪಷ್ಟೀಕರಣ ನೀಡಬೇಕಿದೆ. ಬರುವ ಜೂನ್‌ವರೆಗೂ ಬೆಂಗಳೂರಿನ ಕುಡಿಯುವ ನೀರಿಗೆ ಬೇಕಾಗುವ ನೀರಿನ ಪ್ರಮಾಣ ಹಾಗೂ ಲಭ್ಯತೆ ಇರುವ ನೀರಿನ ಪ್ರಮಾಣ ಈ ಬಗ್ಗೆ ಸ್ಪಷ್ಟೀಕರಣ ಅಗತ್ಯವಿದೆ. ಮುಂದಿನ ಜೂನ್‌ವರೆಗೂ ಕುಡಿಯುವ ನೀರು ಸರಬರಾಜು ಮಾಡಲು ಬೆಂಗಳೂರು ಜಲ ಮಂಡಳಿ ಹಾಕಿಕೊಂಡಿರುವ ಯೋಜನೆ ಕುರಿತು ವಿವರಣೆ ಬೇಕಿದೆ ಎಂದು ಸುರೇಶ್ ಕುಮಾರ್ ಸಲಹೆ ನೀಡಿದ್ದಾರೆ.
ಕೆಟ್ಟು ನಿಂತಿರುವ ಎಲ್ಲಾ ಕೊಳವೆ ಬಾವಿಗಳಿಗೆ ತುರ್ತು ದುರಸ್ತಿ ಮಾಡಿಸಬೇಕಿದೆ. ನೀರಿನ ದೊಡ್ಡ ಪ್ರಮಾಣದ ಸೋರುವಿಕೆಗಳನ್ನು ಕೂಡಲೇ ಕಂಡುಹಿಡಿದು ಅದನ್ನೆಲ್ಲಾ ಸರಿಪಡಿಸುವ ಕಾರ್ಯ ಆಗಬೇಕಿದೆ. ಎಲ್ಲಾ ಪ್ರಮುಖ ವಾಲ್ಸ್‌ಗಳನ್ನು (ಬಾವಿ) ವ್ಯವಸ್ಥಿತವಾಗಿ ನಿರ್ವಹಣೆ ಮಾಡಿ, ಸರಬರಾಜಿನಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕಿದೆ.
ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಜೊತೆಗೆ ಸಮನ್ವಯ ಸಾಧಿಸಿ, ಜಲ ಮಂಡಳಿಗಳ ಪಂಪ್‌ಹೌಸ್‌ಗಳಿಗೆ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ರೀತಿಯ ಅಡಚಣೆ ಆಗದಂತೆ ನೋಡಿಕೊಳ್ಳಬೇಕಿದೆ. ಜಲ ಮಂಡಳಿಯ ಎಲ್ಲಾ ವಲಯಗಳು ತಮ್ಮ ತಮ್ಮ ನಿರ್ಧಾರಿತವಾಗಿರುವ ನೀರಿನ ಪ್ರಮಾಣವನ್ನು ಮೀರದಂತೆ ಮತ್ತು ಹೆಚ್ಚು ನೀರನ್ನು ಉಪಯೋಗಿಸದಂತೆ ಎಚ್ಚರವಹಿಸಬೇಕಿದೆ ಎಂದಿದ್ದಾರೆ.
ಅಪರ ಮುಖ್ಯ ಇಂಜಿನೀಯರ್ ಮತ್ತು ಮುಖ್ಯ ಇಂಜಿನೀಯರ್‌ಗಳನ್ನು ಎಲ್ಲಾ ವಿಭಾಗಕ್ಕೆ ನೋಡಲ್ ಅಧಿಕಾರಿಯನ್ನಾಗಿ ನೇಮಿಸುವ ಅಗತ್ಯವಿದೆ. ಮುಂದಿನ ಮಳೆಗಾಲದವರೆಗೂ ಈಗ ಲಭ್ಯವಿರುವ ನೀರನ್ನು ಅತ್ಯಂತ ಕ್ಲಪ್ತವಾಗಿ ಉಪಯೋಗಿಸಲು ಒಂದು ನೀಲಿ ನಕ್ಷೆ ತಯಾರಾಗಬೇಕಿದೆ. ಬರುವ ದಿನಗಳ ಕುಡಿಯುವ ನೀರಿನ ಸರಬರಾಜಿನಲ್ಲಿ ಉಂಟಾಗುವ ಕೊರತೆ ಕುರಿತು ನಾಗರಿಕರಲ್ಲಿ ಜಾಗೃತಿ ಉಂಟು ಮಾಡಬೇಕಿದೆ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ, ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಡಿಕೆಶಿ ಅವರಿಗೆ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಜಲಸಂಕಷ್ಟ ತಪ್ಪಿಸಲು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಿಜೆಪಿ ಆಗ್ರಹ