ಬೆಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಪಾದಯಾತ್ರೆಯಲ್ಲಿ ರಾಜ್ಯ ನಾಯಕರು ತಮ್ಮನ್ನು ಕಡೆಗಣಿಸಿಲ್ಲ ಎಂದು ಮಾಜಿ ಸಚಿವ ಆರ್ ವಿ ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತ ಜೋಡೋ ಪಾದಯಾತ್ರೆಯಲ್ಲಿ ನನಗೂ ಪ್ರಮುಖ ಜವಾಬ್ದಾರಿಯನ್ನೇ ವಹಿಸಲಾಗಿದೆ. ಚಿತ್ರದುರ್ಗದ ಉಸ್ತುವಾರಿ ನೀಡಿದ್ದು, ಅದರ ವೀಕ್ಷಣೆಗೆ ತೆರಳಲಿದ್ದೇನೆ ಎಂದು ಹೇಳಿದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಥಯಾತ್ರೆ ವಿಚಾರ kಉರಿತು ಮಾತನಾಡಿ, ಯಾವುದೇ ವ್ಯಕ್ತಿಯಿಂದ ರಥಯಾತ್ರೆ ನಡೆಯುವುದಿಲ್ಲ. ಪಕ್ಷದಿಂದ ರಥಯಾತ್ರೆ ನಡೆಯುತ್ತದೆ. ಅದರಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಅಧ್ಯಕ್ಷ, ಸಿಎಲ್ಪಿ ನಾಯಕ, ಬಿ ಕೆ ಹರಿಪ್ರಸಾದ್ ಸೇರಿದಂತೆ ಎಲ್ಲರೂ ಇರ್ತಾರೆ. ನಾವೆಲ್ಲರೂ ಸಂಘಟಿತರಾಗಿ ಒಟ್ಟಾಗಿ ಹೋಗ್ತೀವಿ. ಕೆಲವೊಂದು ಸಲಹೆಗಳು ಭಿನ್ನವಾಗಿ ಇರ್ತಾವೆ. ಹಾಗಂತ ಅದನ್ನು ಗೊಂದಲ ಅಂತಾ ಹೇಳೋಕೆ ಆಗಲ್ಲ ಎಂದರು.
ಇದನ್ನೂ ಓದಿ: ನಾನು, ಕೆಪಿಸಿಸಿ ಅಧ್ಯಕ್ಷರು ಬಹಳ ಪ್ರೀತಿ ವಿಶ್ವಾಸದಿಂದಿದ್ದೇವೆ: ದೇಶಪಾಂಡೆ
ಸಾಮೂಹಿಕ ನಾಯಕತ್ವದಲ್ಲಿ ನಾವು ಚುನಾವಣೆಗೆ ಹೋಗ್ತಿದ್ದೇವೆ. ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕೂಡಿ ಭಾರತ್ ಜೋಡೋ ಯಾತ್ರೆ ಪ್ರಚಾರ ಮಾಡ್ತಿದ್ದಾರೆ. ಅನಾವಶ್ಯಕವಾಗಿ ಗೊಂದಲ ನಿರ್ಮಾಣ ಮಾಡೋದು ಸರಿಯಲ್ಲ. ನನಗೆ ಭಾರತ್ ಜೋಡೋದಲ್ಲಿ ಜವಾಬ್ದಾರಿ ಕೊಟ್ಟಿಲ್ಲ ಅಂತಾ ಯಾರು ಹೇಳಿದ್ದು? ನನಗೆ ಚಿತ್ರದುರ್ಗ ಜಿಲ್ಲೆಯ ಜವಾಬ್ದಾರಿ ಕೊಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಜೊತೆಯಲ್ಲಿ ಇರ್ತೇನೆ ಎಂದು ಹೇಳಿದರು.