ಬೆಂಗಳೂರು: ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಲು ಹೋಗಿದ್ದ ಅಧಿಕಾರಿಗಳ ತಂಡದ ಮೇಲೆ ನಗರದ ಪಾದರಾಯನಪುರದಲ್ಲಿ ನಡೆದ ದಾಳಿಯನ್ನು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಖಂಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್-19 ನಿಯಂತ್ರಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ. ಅವುಗಳನ್ನು ಪಾಲಿಸಬೇಕಾದದ್ದು ನಮ್ಮ ಕರ್ತವ್ಯ. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರು ಹಗಲು ರಾತ್ರಿಯೆನ್ನದೆ, ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನಮ್ಮೆಲ್ಲರ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ. ಇಂತಹ ಜೀವ ರಕ್ಷಕರ ಮೇಲಿನ ಹಲ್ಲೆ ಅಮಾನವೀಯ ಎಂದಿದ್ದಾರೆ.
ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ತಡೆಯಬೇಕಾದರೆ ಹಲ್ಲೆ ಮಾಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು, ಅತ್ಯಂತ ಪಾರದರ್ಶಕವಾಗಿ ತನಿಖೆ ನಡೆಸಬೇಕು ಎಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ. ಈ ನಾಡಿನ ಕಾನೂನನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದ್ದಾರೆ.
ಈಗಾಗಲೇ ಕಾಂಗ್ರೆಸ್ನ ಬಹುತೇಕ ನಾಯಕರು ಪಾದರಾಯನಪುರದ ಘಟನೆಯನ್ನು ಖಂಡಿಸಿದ್ದು, ಗಲಭೆ ನಡೆಸಿರುವ ಕಿಡಿಗೇಡಿಗಳ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡರು ಅದಕ್ಕೆ ಸಹಮತ ನೀಡುತ್ತೇವೆ ಎಂದಿದ್ದಾರೆ.