ಬೆಂಗಳೂರು : ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಕಟ್ಟಿಸಿಕೊಂಡು ವಂಚನೆ ಎಸಗಿರುವ ಐ ಮಾನಿಟರಿ ಅಡ್ವೈಸರಿ (ಐಎಂಎ) ಸಂಸ್ಥೆಯಿಂದ ಅಕ್ರಮವಾಗಿ ಹಣ ಪಡೆದ ಆರೋಪಡಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಮತ್ತೆ ಸಿಬಿಐ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ.
ಬಹುಕೋಟಿ ವಂಚನೆ ಪ್ರಕರಣದಲ್ಲಿ 36ನೇ ಆರೋಪಿಯಾಗಿ ಬಂಧಿಸಿರುವ ರೋಷನ್ ಬೇಗ್ ಅವರನ್ನು ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದೆ. ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಆರೋಪಿಯನ್ನು ತನಿಖೆಗೆ ಒಳಪಡಿಸಬೇಕಿದೆ. ಹೀಗಾಗಿ 3 ದಿನಗಳ ಕಾಲ ವಶಕ್ಕೆ ನೀಡುವಂತೆ ಸಿಬಿಐ ಪರ ವಿಶೇಷ ಅಭಿಯೋಜಕ ಸುದರ್ಶನ್ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಇದಕ್ಕೆ ಆಕ್ಷೇಪಿಸಿದ ರೋಷನ್ ಬೇಗ್ ಪರ ವಕೀಲರಾದ ಸಿದ್ದಾರ್ಥ್ ಅವರು, ರೋಷನ್ ಬೇಗ್ ಅವರನ್ನು ಸಿಬಿಐ ಅಧಿಕಾರಿಗಳು ಕಳೆದ ಭಾನುವಾರದಿಂದ ಸಾಕಷ್ಟು ವಿಚಾರಣೆ ನಡೆಸಿದ್ದಾರೆ. ಹೀಗಾಗಿ ಮತ್ತೆ ವಶಕ್ಕೆ ನೀಡುವ ಅಗತ್ಯವಿಲ್ಲ ಎಂದು ಮನವಿ ಮಾಡಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಮಂಜುಳಾ ಇಟ್ಟಿ ಅವರು, ಅಂತಿಮವಾಗಿ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಸಿಬಿಐ ವಶಕ್ಕೆ ನೀಡಿ ಆದೇಶಿಸಿದರು. ಅಲ್ಲದೇ, ರೋಷನ್ ಬೇಗ್ ಅವರನ್ನು 28ರ ಬೆಳಗ್ಗೆ 11 ಗಂಟೆಗೆ ನ್ಯಾಯಾಲಯದ ಎದುರು ಹಾಜರುಪಡಿಸುವಂತೆ ಸೂಚಿಸಿ, ವಿಚಾರಣೆ ಮುಂದೂಡಿದರು.