ಬೆಂಗಳೂರು : ಬಿಟಿಎಂ ಲೇಔಟ್ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾ ರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ಕೆ.ಆರ್.ಶ್ರೀಧರ್ ವಿರುದ್ಧ 14 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಮಧ್ಯಾಹ್ನ 2.10ಕ್ಕೆ ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾ ರೆಡ್ಡಿ 63191 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀಧರ್ ಅವರು 52,515 ಮತಗಳನ್ನು ಪಡೆದರೆ, ಜೆಡಿಎಸ್ ಅಭ್ಯರ್ಥಿ ಎಂ.ವೆಂಕಟೇಶ್ 1,613 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ರಾಮಲಿಂಗಾ ರೆಡ್ಡಿ ಸತತ 8ನೇ ಬಾರಿ ಗೆದ್ದು ದಾಖಲೆ ಸೃಷ್ಟಿಸಿದ್ದಾರೆ.
ಇಲ್ಲಿಯವರೆಗೆ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರಾಮಲಿಂಗಾರೆಡ್ಡಿ, ಕಾಂಗ್ರೆಸ್ನ ಹಿರಿಯ ಹಾಗೂ ಪ್ರಭಾವಿ ನಾಯಕರು. ಬೆಂಗಳೂರಿನ ಬಿಟಿಎಂ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಸ್ಪರ್ಧೆ ಮಾಡಿದ್ದರು. ಜಯನಗರ ಕ್ಷೇತ್ರದಿಂದ ನಾಲ್ಕು ಬಾರಿ ಜಯಗಳಿಸಿದ್ದ ಅವರು, 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ನಂತರ ಹೊಸದಾಗಿ ರಚನೆಯಾದ ಬಿಟಿಎಂ ಲೇಔಟ್ ಕ್ಷೇತ್ರಕ್ಕೆ ಬಂದರು. ಬಿಟಿಎಂ ಲೇಔಟ್ ಕ್ಷೇತ್ರದಿಂದ ಮೂರು ಬಾರಿ ಗೆಲುವು ದಾಖಲಿಸಿದ ರಾಮಲಿಂಗಾ ರೆಡ್ಡಿ, ಅಲ್ಲಿಂದ ಇಲ್ಲಿಯವರೆಗೂ ಈ ಕ್ಷೇತ್ರದಲ್ಲಿ ತಮ್ಮ ಹಿಡಿತ ಸಾಧಿಸಿಕೊಂಡು ಬಂದಿದ್ದಾರೆ. ಅಲ್ಲದೆ ರಾಮಲಿಂಗಾರೆಡ್ಡಿ ಅವರು ಸಚಿವರಾಗಿಯೂ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ : 'ಲೋಕ' ಬಳಿಕ ವಿಧಾನಸಭೆ ಚುನಾವಣೆಯಲ್ಲೂ ನಿಖಿಲ್ ಕುಮಾರಸ್ವಾಮಿಗೆ ಸೋಲು
ಬೆಂಗಳೂರಿನ ಅತ್ಯಂತ ಹಿರಿಯ ಕಾಂಗ್ರೆಸ್ ನಾಯಕರಾಗಿರುವ ರಾಮಲಿಂಗಾರೆಡ್ಡಿ ಅವರು ಶಾಂತ ಸ್ವಭಾವದ ವ್ಯಕ್ತಿಯಾಗಿದ್ದಾರೆ. ಕ್ಷೇತ್ರದ ಜನರ ಹತ್ತಿರಕ್ಕೆ ಹೋಗುವ ಹೋಗುವ ಅವರು ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸುತ್ತಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತವೆ. ಅಲ್ಲದೇ ವರ್ಷದಿಂದ ವರ್ಷಕ್ಕೆ ಅವರು ತಮ್ಮ ಮತದಾರರ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ.
ರಾಮಲಿಂಗಾ ರೆಡ್ಡಿ ಈ ಹಿಂದೆ ರಾಜ್ಯದ ಗೃಹ ಹಾಗೂ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ. ಇವರು ಸದ್ಯ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾರೆಡ್ಡಿ ಅವರು ಬಿಜೆಪಿ ಅಭ್ಯರ್ಥಿ ಲಲ್ಲೇಶ್ ರೆಡ್ಡಿ ಅವರನ್ನು 20,478 ಮತಗಳ ಅಂತರದಿಂದ ಸೋಲಿಸುವ ಮೂಲಕ ವಿಧಾನಸಭೆ ಪ್ರವೇಶ ಮಾಡಿದರು. ಈ ಚುನಾವಣೆಯಲ್ಲಿಯೂ ಅವರು ಬಿಟಿಎಂ ಲೇಔಟ್ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು.
ಪುತ್ರಿ ಸೌಮ್ಯ ರೆಡ್ಡಿ ಕೂಡ ರಾಜಕೀಯಲ್ಲಿ ಗುರುತಿಸಿಕೊಂಡಿದ್ದು, ಸದ್ಯ ಅವರು ಜಯನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಸೌಮ್ಯ ರೆಡ್ಡಿ ವಿರುದ್ಧ ಬಿಜೆಪಿಯ ಬಿ.ಕೆ.ರಾಮಮೂರ್ತಿ ಕಣದಲ್ಲಿದ್ದರು. ಬಿಟಿಎಂ ಲೇಔಟ್ನಲ್ಲಿ ಸ್ಪರ್ಧೆ ಮಾಡಿದ್ದ ರಾಮಲಿಂಗಾರೆಡ್ಡಿ ವಿರುದ್ಧ ಬಿಜೆಪಿಯ ಶ್ರೀಧರ ರೆಡ್ಡಿ ಸ್ಪರ್ಧೆ ಮಾಡಿದ್ದರು.
ಇದನ್ನೂ ಓದಿ : 50 ಸಾವಿರ ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ ಸತೀಶ್ ಜಾರಕಿಹೊಳಿ