ಆನೇಕಲ್: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಾಟೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ರಾಜ್ಯ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಆನೇಕಲ್ ತಾಲೂಕಿನ ಸೂರ್ಯ ಸಿಟಿಯಲ್ಲಿ ಕಾರ್ಯಕರ್ತರ ಸಭೆ ಬಳಿಕ ಅವರು ಮಾತನಾಡಿದರು. 'ಆರ್.ಆರ್. ನಗರ ಉಪ ಚುನಾವಣಾ ನಾಮಪತ್ರ ಸಲ್ಲಿಕೆ ವೇಳೆ ಬ್ಯಾರಿಕೇಡ್ ತೆಗೆದು 100 ಮೀಟರ್ ಒಳಗೆ ಗೊತ್ತಿಲ್ಲದೆ ಚಾಲಕ ಕಾರನ್ನು ತೆಗೆದುಕೊಂಡು ಹೋಗಿದ್ದ. ಆ ಬಳಿಕ ಪೊಲೀಸರು ಆತನನ್ನು ವಾಪಸ್ ಕಳುಹಿಸಿದ್ದರು. ಇನ್ನು ಮುಂದೆ ಈ ರೀತಿ ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳಿ ಎಂದು ಹೇಳಿದರೆ ಆಗುತ್ತಿತ್ತು. ಅದನ್ನೇ ದೊಡ್ಡದನ್ನಾಗಿ ಮಾಡುವ ಅವಶ್ಯಕತೆ ಇರಲಿಲ್ಲ. ಅನವಶ್ಯಕವಾಗಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಕೇಸು ದಾಖಲಿಸುವುದು ಸರಿಯಲ್ಲ' ಎಂದರು.
ಇನ್ನು, 'ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಾಟೆ ವಿಚಾರದಲ್ಲಿ ವಿವಾದಿತ ಪೋಸ್ಟ್ ಹಾಕಿದ್ದ ನವೀನ್‌ನನ್ನು ಕೂಡಲೇ ಬಂಧಿಸಿ ಕಾನೂನು ರೀತಿ ಕ್ರಮ ಜರುಗಿಸಿದ್ದರೆ ಈ ಗಲಾಟೆ ಆಗುತ್ತಿರಲಿಲ್ಲ. ಆದರೆ ಈಗ ಬಿಜೆಪಿ ಸರ್ಕಾರ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲು ಹೊರಟಿದೆ. ಸರ್ಕಾರದ ಒತ್ತಡದಿಂದ ಸಂಪತ್ ರಾಜ್ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಈ ಪ್ರಕರಣದಲ್ಲಿ ಸಂಪತ್‌ರಾಜ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಇದರ ಹಿಂದೆ ಯಾರೇ ತಪ್ಪು ಮಾಡಿದರು ಶಿಕ್ಷೆ ಅನುಭವಿಸಲಿ, ಪೊಲೀಸರು ನಿಷ್ಪಕ್ಷಪಾತವಾದ ತನಿಖೆ ಮಾಡಲಿ' ಎಂದರು.
ಆರ್‌ಆರ್ ನಗರ ಉಪ ಚುನಾವಣೆಯಲ್ಲಿ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಒಂದು ವಾರ್ಡ್‌ನ ಉಸ್ತುವಾರಿಯಾಗಿ ಮಾಡಲಾಗಿದೆ. ಅವರು ಕೂಡ ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದರು.
'ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಬರಿ ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಡ್ರಗ್ಸ್ ಪ್ರಕರಣದಲ್ಲಿ ಇನ್ನೂ ಯಾರೂ ಇಲ್ವವೇ? ನಟಿಯರು ತಪ್ಪು ಮಾಡಿರಬಹುದು, ನಾನು ಇಲ್ಲ ಎಂದು ಹೇಳುವುದಿಲ್ಲ, ಯಾರೇ ಪ್ರಭಾವಿಗಳು ಆಗಿದ್ದರೂ ಸಹ ಅವರನ್ನೂ ಬಂಧನ ಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕು. ಆದರೆ ಉಳಿದವರ ಬಂಧನ ಯಾಕೆ ಆಗುತ್ತಿಲ್ಲ, ಯಾಕೆ ಗೃಹ ಮಂತ್ರಿಗಳಿಗೆ ಮಾಹಿತಿ ಇಲ್ವಾ? 'ಎಂದು ಪ್ರಶ್ನೆ ಮಾಡಿದರು.