ದಾವಣಗೆರೆ : ಚುನಾವಣೆಯಲ್ಲಿ ದುಂದು ವೆಚ್ಚ ಕಲಿಸಿದ್ದೇ ಬಿಜೆಪಿ. 2008ರ ನಂತರ ಚುನಾವಣೆಗಳು ವೆಚ್ಚದಾಯಕವಾಗಿವೆ. ಹಣವಂತರಿಗೆ ದೊಡ್ಡ ದೊಡ್ಡ ಕುಳಗಳಿಗೆ ಟಿಕೆಟ್ ನೀಡಿದ್ದೇ ಬಿಜೆಪಿ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ನಡೆದ ಪ್ರಚಾರ ಸಭೆ ಮುನ್ನ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣಾ ಪ್ರಚಾರ ಮಾಡುತ್ತಾ ಬಂದಿದ್ದೇವೆ, ಎಲ್ಲ ಕಡೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಾತಾವರಣ ಇದೆ, 25 ಕ್ಷೇತ್ರದಲ್ಲಿ ನಾವು ಸ್ಪರ್ಧಿಸಿದ್ದೇವೆ. ಬಿಜೆಪಿಗಿಂತ ಜಾಸ್ತಿ ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವನಾಥ್ ಹತ್ಯೆ ಸಂಚಿನ ವಿಚಾರ ಸೂಕ್ತ ತನಿಖೆ ಆಗಲಿ : ನಾನು ಈ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ, ಯಾರು ತಪ್ಪು ಮಾಡಿದ್ದಾರೆ ಎನ್ನುವುದನ್ನು ಪೊಲೀಸ್‌ನವರು ಸರಿಯಾದ ತನಿಖೆ ನಡೆಸಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು.
ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಗೆ ನಷ್ಟವಿಲ್ಲ : ಪ್ರಧಾನಿ ಮೋದಿಯವರನ್ನ ದೇವೇಗೌಡರು ಭೇಟಿ ಮಾಡಿದ್ದಾರೆ, ಯಾವ ಕಾರಣಕ್ಕೆ ಭೇಟಿ ಮಾಡಿದ್ದಾರೆ ಎನ್ನುವುದು ಅವರಿಗೇ ಗೊತ್ತು. ರೈತರ ವಿಚಾರನೋ, ಚುನಾವಣೆ ವಿಚಾರನೋ ಗೊತ್ತಿಲ್ಲ. ಯಡಿಯೂರಪ್ಪ ಕೂಡ ಕುಮಾರಸ್ವಾಮಿಯವರ ಬೆಂಬಲ ಕೋರಿದ್ದಾರೆ. ಕುಮಾರಸ್ವಾಮಿ ಇದರ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ, ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಗೆ ನಷ್ಟವಿಲ್ಲ ಎಂದರು.