ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಸರ್ಕಾರ ಮಾನಸಿಕ ದಾರಿದ್ರ್ಯ ಸ್ಥಿತಿ ತಲುಪಿದೆ ಎಂದು ಕಿಡಿಕಾರಿದ್ದಾರೆ.
ಟ್ವೀಟ್ ಮೂಲಕ ಈ ಆರೋಪ ಮಾಡಿರುವ ಅವರು, ನಾನು ಗಮನಿಸಿದಂತೆ ಬಸವಣ್ಣರ ಆದಿಯಾಗಿ ಇತ್ತೀಚಿನ ಸಿದ್ದಗಂಗಾ ಕ್ಷೇತ್ರದ ಶಿವಕುಮಾರ ಸ್ವಾಮಿಗಳ ಅನ್ನ ಮತ್ತು ಅಕ್ಷರ ದಾಸೋಹದ ಕಲ್ಪನೆಯನ್ನು ಹೊಗಳುವ ಬಿಜೆಪಿ ಸರ್ಕಾರ ಅಂತಹ ಕೆಲಸವನ್ನು ಜಾರಿ ಮಾಡಿದವರ ಬಗ್ಗೆ ಕನಿಷ್ಠ ಗೌರವವನ್ನೂ ಇಟ್ಟುಕೊಳ್ಳದಂತಹ ಮಾನಸಿಕ ದಾರಿದ್ರ್ಯದ ಸ್ಥಿತಿಗೆ ತಲುಪಿದ್ದು, ಈಗ ಅನ್ನಭಾಗ್ಯವನ್ನು ಅವಮಾನಿಸುತ್ತಿದ್ದಾರೆ.
2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅತ್ಯಂತ ಮಹತ್ವದ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯನ್ನು ಹಂತ ಹಂತವಾಗಿ ರಾಜ್ಯ ಸರ್ಕಾರ ನಿಲ್ಲಿಸುವ ಪ್ರಯತ್ನ ಮಾಡುತ್ತಿದೆ.
ಹಂತ ಹಂತವಾಗಿ ಭಾಗ್ಯದಡಿ ನೀಡುವ ಪಡಿತರ ಪ್ರಮಾಣವನ್ನು ಕಡಿಮೆ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಾ ಬಂದಿದ್ದಾರೆ. ಇದೀಗ ಮಹದೇವಪ್ಪ ಕೂಡ ಈ ಕೂಗಿಗೆ ದನಿ ಸೇರಿಸಿದ್ದಾರೆ.