ಬೆಂಗಳೂರು : ಮಹಾದಾಯಿ ವಿಚಾರವಾಗಿ ರಾಜ್ಯದ ಹಿತಾಸಕ್ತಿ ಕಾಪಾಡಲು ಬದ್ಧರಾಗಿದ್ದೇವೆ. ನಮ್ಮ ಸರ್ಕಾರ ಬಂದರೆ ಸಮಸ್ಯೆ ಇತ್ಯರ್ಥ ಮಾಡುತ್ತೇವೆ ಎಂದು ಮಾಜಿ ಜಲಸಂಪನ್ಮೂಲ ಖಾತಿ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗೋವಾ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಮಹಾದಾಯಿ ಯೋಜನೆಗೆ ಸಮ್ಮತಿ ಇಲ್ಲ ಎಂಬ ವಿಚಾವಾಗಿ ಪ್ರತಿಕ್ರಿಯಿಸುತ್ತಾ, ಅಂತಾರಾಜ್ಯ ಜಲ ವಿವಾದವಿದೆ.
ಮಹದಾಯಿ ಬಗ್ಗೆ ನಾವು ಹಿತವನ್ನು ಕಾಪಾಡುತ್ತೇವೆ. ಎರಡು ರಾಜ್ಯಗಳಿಗೂ ನ್ಯಾಯ ಸಿಗಬೇಕಿದೆ. ನಾವು ಅಧಿಕಾರಕ್ಕೆ ಬಂದರೆ ಸಮಸ್ಯೆ ಬಗೆಹರಿಸುತ್ತೇವೆ. ಅಲ್ಲಿನ ಜನರನ್ನ ಮಾತುಕತೆ ಮೂಲಕ ಒಪ್ಪಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಒಂದು ತಿಂಗಳಲ್ಲಿ ನೀರು ಕೊಡ್ತೇವೆ ಅಂದ್ರು. ಆದರೆ, ಅವರು ಈವರೆಗೆ ಕೊಡಲಿಲ್ಲ. ಆದರೆ, ಅಧಿಕಾರಕ್ಕೆ ನಾವು ಬಂದರೆ ಮಾತುಕತೆ ನಡೆಸುತ್ತೇವೆ. ಸುಪ್ರೀಂನಲ್ಲೂ ಹೋರಾಟ ಮುಂದುವರೆಸುತ್ತೇವೆ. ನಮ್ಮ ರಾಜ್ಯಕ್ಕೆ ಬರಬೇಕಾದ ನೀರು ಪಡೆಯುತ್ತೇವೆ.
ಆ ರಾಜ್ಯದ ಪರ ಅಲ್ಲಿಯವರಿದ್ದಾರೆ. ನಮ್ಮ ರಾಜ್ಯದ ಪರವಾಗಿ ನಾವೆಲ್ಲರೂ ಇದ್ದೇವೆ. ಇಬ್ಬರಿಗೂ ಅನ್ಯಾಯ ಆಗಬಾರದು. ನಾವು ಕುಡಿಯುವ ನೀರು ಕೇಳಿದ್ದೇವೆ. ಹಾಗಾಗಿ, ನಮ್ಮ ಪಾಲಿನ ನೀರು ನಮಗೆ ಸಿಗುತ್ತದೆ. ಅಲ್ಲಿ ಹೆಚ್ಚಿನ ಕನ್ನಡಿಗರು ಇದ್ದಾರೆ.
ಹಾಗಾಗಿ, ಉತ್ತಮ ಬಾಂಧವ್ಯ ಅವಶ್ಯಕತೆ ಇದೆ. ಇಬ್ಬರೂ ಸೋಲಬಾರದು, ಇಬ್ಬರೂ ಗೆಲ್ಲಬಾರದು. ಇಬ್ಬರಿಗೂ ಒಳ್ಳೆಯದಾಗಬೇಕು. ಆ ನಿಟ್ಟಿನಲ್ಲಿ ಸಮಸ್ಯೆ ಬಗೆ ಹರಿಸುತ್ತೇವೆ ಎಂದರು.
ಕಳೆದ ಬಾರಿಯೇ ನಾವು ಸರ್ಕಾರ ರಚಿಸಬೇಕಿತ್ತು. 17 ಸೀಟುಗಳನ್ನ ನಾವು ಗೆದ್ದಿದ್ದೆವು. ಬಿಜೆಪಿಯವರು ಕಸಿದು ಅಧಿಕಾರ ಹಿಡಿದಿದ್ದರು. ಈಗ ಬಿಜೆಪಿ ವಿರುದ್ಧ ಜನ ತಿರುಗಿಬಿದ್ದಿದ್ದಾರೆ. ಗೋವಾದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಹೆಣ್ಣುಮಕ್ಕಳ ಸಮಸ್ಯೆಯೂ ಗಣನೀಯವಾಗಿದೆ. ಜನ ಅಲ್ಲಿ ಕಾಂಗ್ರೆಸ್ ಪರ ಒಲವು ಹೊಂದಿದ್ದಾರೆ. ಕನಿಷ್ಠ 27 ಸೀಟುಗಳನ್ನು ನಾವು ಗೆಲ್ಲುತ್ತೇವೆ ಎಂದರು.
ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಜಾಬ್ ವಿಚಾರದಲ್ಲಿ ರಾಜಕೀಯ ಬೇಡ. ರಾಜಕೀಯ ದುರುದ್ದೇಶ ಇರಬಾರದು. ನಾನು ಕೂಡ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೇನೆ. 35 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ನಾವು ಎಂದೂ ಮಕ್ಕಳ ಮೇಲೆ ಪ್ರಭಾವ ಬೀರಿಲ್ಲ.
ನಮ್ಮ ರಾಜಕೀಯ ಶಾಲೆ ಗೋಡೆಯಿಂದ ಹೊರಗಿರುತ್ತದೆ. ನಾವು ಮಕ್ಕಳಲ್ಲಿ ವಿಷ ಬೀಜ ಬಿತ್ತಬಾರದು. ಮೊದಲು ಹಿಜಾಬ್ ಇರಲಿಲ್ವೇ?. ಅದನ್ನ ಮುಂದುವರೆಸಿಕೊಂಡು ಹೋಗಬೇಕು. ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಆಗಬಾರದು. ಹಾಗಾದರೆ, ಅವರ ಶಿಕ್ಷಣ ಕುಸಿಯುತ್ತದೆ ಎಂದರು.
ಶಾಲೆಯಲ್ಲಿ ಸಮವಸ್ತ್ರ ಬೇಕಾ ಎಂಬ ವಿಚಾರವಾಗಿ ಮಾತನಾಡಿದ ಅವರು, ಇದಕ್ಕೂ ಮೊದಲು ಏನಿತ್ತು?. ಹಿಜಾಬ್ ಪ್ರಕರಣಕ್ಕೂ ಮೊದಲು ಏನಿತ್ತು ಅದು ಮುಂದುವರೆಯಬೇಕು. ಮಕ್ಕಳಲ್ಲಿ ರಾಜಕೀಯ ಹಿತಾಸಕ್ತಿ ಬಿತ್ತಬಾರದು. ಇದನ್ನು ಸ್ಪಾನ್ಸರ್ ಮಾಡಿದ್ದೇ ಬಿಜೆಪಿ. ಚುನಾವಣೆ ಒಂದು ವರ್ಷವಿದೆ. ಜನರನ್ನು ಡೈವರ್ಟ್ ಮಾಡೋಕೆ ಹೊರಟಿದ್ದಾರೆ. ಬಿಜೆಪಿಯವರು ಇದನ್ನ ಮೊದಲು ನಿಲ್ಲಿಸಬೇಕು. ಅವರು ಯಾವುದೇ ಅಭಿವೃದ್ಧಿ ಮಾಡಿಲ್ಲ. ಅದಕ್ಕೆ ಇಂತದ್ದನ್ನೆಲ್ಲ ಹುಡುಕುತ್ತಾರೆ ಎಂದರು.
ನಾವು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ 125 ಸೀಟು ಪಡೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಇಲ್ಲಿ ಸಿದ್ದರಾಮಯ್ಯ, ಡಿಕೆಶಿ ಎಲ್ಲರೂ ಒಟ್ಟಾಗಿಯೇ ಇದ್ದೇವೆ. ಯಾರ ನಡುವೆ ಮನಸ್ತಾಪವಿಲ್ಲ. ಅಧಿಕಾರಕ್ಕೆ ಬರುವುದಷ್ಟೇ ನಮ್ಮ ಗುರಿ ಎಂದರು.
ಇಬ್ರಾಹಿಂ ಪಕ್ಷ ತೊರೆಯುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಬ್ರಾಹಿಂಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಭದ್ರಾವತಿಯಲ್ಲಿ ಎಂಎಲ್ಎಗೆ ಟಿಕೆಟ್ ತಪ್ಪಿಸಿ ಇವರಿಗೆ ಕೊಡಲಾಗಿದೆ. ಪರಿಷತ್ ಸದಸ್ಯರನ್ನಾಗಿ ಮಾಡಿದೆ. ಕಾಂಗ್ರೆಸ್ ಪಕ್ಷ ಅವರಿಗೆ ಅನ್ಯಾಯ ಮಾಡಿಲ್ಲ. ಅವರನ್ನ ನಾವು ಒಪ್ಪಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.