ಬೆಂಗಳೂರು : ಚುನಾವಣಾ ಪ್ರಚಾರ ಹೇಗೆ ಮಾಡಬೇಕು, ಯಾವ ವಿಚಾರಗಳನ್ನು ಪ್ರಚಾರ ಮಾಡಬೇಕು ಎಂಬ ಚರ್ಚೆ ದಿಲ್ಲಿಯಲ್ಲಿ ನಡೆದಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯ ಪಟ್ಟಿದ್ದಾರೆ. ನಗರದಲ್ಲಿ ದೆಹಲಿಯಲ್ಲಿ ನಡೆದ ಮೀಟಿಂಗ್ ವಿಚಾರವಾಗಿ ಮಾತನಾಡಿದ ಅವರು, ಒಗ್ಗಟ್ಟಾಗಿ ಹೋಗುವುದಲ್ಲ, ನಾವೆಲ್ಲ ಒಗ್ಗಟ್ಟಾಗಿಯೇ ಇದ್ದೇವೆ. ಎಲ್ಲ ಕಡೆ ಎಲ್ಲರೂ ಒಂದೇ ಸಲ ಹೋಗಿ ಪ್ರಚಾರ ಮಾಡಲು ಸಾಧ್ಯವಿಲ್ಲ. ಹಾಗಾಗಿ ಪ್ರತ್ಯೇಕವಾಗಿ ಪ್ರಚಾರ ಮಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.
ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆ: ದೆಹಲಿ ಸಭೆಯಲ್ಲಿ ಟಿಕೆಟ್ ಹಂಚಿಕೆ ವಿಚಾರವೂ ಚರ್ಚೆಯಾಗಿದೆ. ಈಗಾಗಲೇ ಅರ್ಜಿಗಳನ್ನು ಕರೆದಿದ್ದೇವೆ. ಈಗ ಎಲ್ಲ ಬ್ಲಾಕ್ ಮತ್ತು ಜಿಲ್ಲಾಮಟ್ಟದಿಂದ ಡಿಸಿಸಿ ಪ್ರೆಸಿಡೆಂಟ್ ಗಳ ಅಭಿಪ್ರಾಯಗಳನ್ನು ತೆಗೆದುಕೊಳ್ಳುತ್ತೇವೆ. ಅವರ ಅಭಿಪ್ರಾಯವನ್ನು ತೆಗೆದುಕೊಂಡು ಚುನಾವಣಾ ಸಮಿತಿ ತೀರ್ಮಾನ ಮಾಡುತ್ತದೆ. ಬಳಿಕ ಸ್ಕ್ರೀನಿಂಗ್ ಕಮಿಟಿಗೆ ಪಟ್ಟಿ ಕಳಿಸಿಕೊಡಲಾಗುತ್ತದೆ. ಈ ತಿಂಗಳಿನಲ್ಲಿ ಎಲ್ಲ ಪ್ರಕ್ರಿಯೆಗಳು ಆರಂಭವಾಗಲಿದೆ ಎಂದರು.
ಹೊಸ ಮುಖಗಳಿಗೆ ಅವಕಾಶ: ಹೊಸ ಮುಖಗಳಿಗೆ ಖಂಡಿತ ಅವಕಾಶ ಇದೆ. ಪ್ರತಿ ಕ್ಷೇತ್ರಗಳಲ್ಲಿ ಎರಡು ಮೂರು ಸರ್ವೆಗಳು ನಡೆದಿದೆ. ಅಂತಿಮವಾಗಿ ಗೆಲ್ಲುವುದು ಮುಖ್ಯ ಗುರಿ, ಸಾಮಾಜಿಕ ನ್ಯಾಯ ಇನ್ನೊಂದು ಗುರಿ. ಇವೆರಡನ್ನೂ ಸಮತೋಲನದಿಂದ ತೆಗೆದುಕೊಂಡು ಹೋಗಬೇಕು. ಈ ಬಾರಿ ವೈಜ್ಞಾನಿಕವಾಗಿ ಟಿಕೆಟ್ ಹಂಚಿಕೆ ಮಾಡಲಾಗುತ್ತಿದೆ. ಎಷ್ಟು ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ಟಿಕೆಟ್ ಘೋಷಣೆ ಎಂದು ಹೇಳುವುದು ಕಷ್ಟ. ಅದನ್ನು ಸ್ಕ್ರೀನಿಂಗ್ ಕಮಿಟಿ ತೀರ್ಮಾನ ಮಾಡುತ್ತದೆ. ಎಷ್ಟು ಸಾಧ್ಯವಾಗುತ್ತದೋ ಅಷ್ಟು ಟಿಕೆಟ್ ಘೋಷಣೆ ಆಗುತ್ತದೆ ಎಂದು ಹೇಳಿದರು.
ವಸ್ತುಸ್ಥಿತಿ ಪರಿಶೀಲಿಸಿ ತೀರ್ಮಾನ: ಹಾಲಿ ಶಾಸಕರಿಗೆ ಟಿಕೆಟ್ ಕೊಡುವ ವಿಚಾರವಾಗಿ, ಚುನಾವಣಾ ಸಮಿತಿ ಹಾಲಿ ಶಾಸಕರಿಗೆ ಟಿಕೆಟ್ ಕೊಡುವ ಬಗ್ಗೆ ತೀರ್ಮಾನ ಮಾಡುತ್ತದೆ. ಹಾಲಿ ಇರುವ ಶಾಸಕರಿಗೆ ಟಿಕೆಟ್ ಸಿಗಬೇಕು. ಕೆಲವು ಸಂದರ್ಭಗಳಲ್ಲಿ ವಸ್ತು ಸ್ಥಿತಿ ಇಟ್ಟುಕೊಂಡು ತೀರ್ಮಾನ ಮಾಡಬೇಕಾಗುತ್ತದೆ.
ಹೀಗಾಗಿ ಇದನ್ನು ಎಲೆಕ್ಷನ್ ಕಮಿಟಿ ನೋಡಿಕೊಳ್ಳುತ್ತದೆ. ಯಾರು ಸ್ಥಳೀಯವಾಗಿ ಜನರ ಜೊತೆ ಇದ್ದು ಕೆಲಸ ಮಾಡುತ್ತಿದ್ದಾರೆ, ಪಕ್ಷ ಸಂಘಟನೆ ಮಾಡಿದ್ದಾರೆ, ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ ಅಂತವರಿಗೆ ವಯಸ್ಸು ಮಾನದಂಡ ಆಗಬಾರದು. ಜನ ಸಂಪರ್ಕ ಇರುವಂತವರಿಗೆ ಟಿಕೆಟ್ ಕೊಡಬೇಕು. ಈ ಎಲ್ಲ ಮಾನದಂಡಗಳನ್ನು ಎಲೆಕ್ಷನ್ ಕಮಿಟಿ ನೋಡುತ್ತದೆ ಎಂದು ಹೇಳಿದರು.
ಜನರಿಗೆ ಕಾಂಗ್ರೆಸ್ ಮೇಲೆ ವಿಶ್ವಾಸ ಇದೆ : ಬೇರೆ ಪಕ್ಷಗಳ ನಾಯಕರು ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲುವ ಅವಕಾಶ ಇದೆ. ನಾವು ಹೇಗೆ ಅದನ್ನು ಪ್ರಚಾರದಲ್ಲಿ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಇದೆ. ಕಾಂಗ್ರೆಸ್ಗೆ ಇದು ಗೆಲ್ಲುವಂತ ಚುನಾವಣೆ, ಜನರಿಗೂ ಕೂಡ ವಿಶ್ವಾಸ ಇದೆ. ಹಾಗಾಗಿ ಸಾಕಷ್ಟು ಜನ ಕಾಂಗ್ರೆಸ್ ಪಕ್ಷದ ಕಡೆ ನೋಡುತ್ತಿದ್ದಾರೆ ಎಂದು ಹೇಳಿದರು.
ಪಕ್ಷ ಬಿಟ್ಟು ಹೋದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರದ ಬಗ್ಗೆ ಮಾತನಾಡಿ, ಈ ವಿಚಾರದಲ್ಲಿ ಕೇಸ್ ಟು ಕೇಸ್ ನೋಡಬೇಕಾಗುತ್ತದೆ. ಕೇಸ್ ಟು ಕೇಸ್ ನೋಡಿಕೊಂಡು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.
ಇದನ್ನೂ ಓದಿ : ವಿಧಾನಸಭೆ ಚುನಾವಣೆ: ಹರಿಹರ ಕ್ಷೇತ್ರದಲ್ಲಿ 9 'ಕೈ' ಆಕಾಂಕ್ಷಿಗಳ ಪೈಪೋಟಿ