ಬೆಂಗಳೂರು: ಗೃಹ ಸಚಿವ ಎಂ.ಬಿ.ಪಾಟೀಲ್ ಲೆಟರ್ ಹೆಡ್ ನಕಲು ಮಾಡಿದ ಪ್ರಕರಣದಡಿ ಸಿಐಡಿ ಪೊಲೀಸರು ಮತ್ತೋರ್ವ ಮಾಜಿ ಪತ್ರಕರ್ತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿಂದೆ ಸಿಐಡಿ ಪೊಲೀಸ್ ಬಂಧಿಸಿದ್ದ ಪೋಸ್ಟ್ ಕಾರ್ಡ್ ಪತ್ರಿಕೆಯ ಮಹೇಶ್ ವಿಕ್ರಮ್ ಹೆಗ್ಡೆ ಹೇಳಿಕೆಯ ಆಧಾರದ ಮೇಲೆ ನಿನ್ನೆ ರಾತ್ರಿ ಮಡಿಕೇರಿಯಲ್ಲಿ ಬಂಧಿಸಿದ್ದಾರೆ.
ಗೃಹ ಸಚಿವ ಎಂ.ಬಿ.ಪಾಟೀಲ್ ಲೆಟರ್ ಹೆಡ್ ನಕಲು ಮಾಡಿದ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ಸಿಐಡಿ ವಿಚಾರಣೆ ವೇಳೆ ಲೆಟರ್ ನಕಲು ಮಾಡಲು ಹೇಮಂತ್ ಕುಮಾರ್ ತಿಳಿಸಿದ್ದಾಗಿ ಮಹೇಶ್ ಹೆಗ್ಡೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಎಂ.ಬಿ.ಪಾಟೀಲ್ ಹೆಸರಿನಲ್ಲಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ ಅರೋಪದಡಿ ಹೇಮಂತ್ ಕುಮಾರ್ನನ್ನ ನಿನ್ನೆ ರಾತ್ರಿ ಮಡಿಕೇರಿಯಲ್ಲಿ ಬಂಧಿಸಲಾಗಿದೆ.
ಇತ್ತೀಚಿಗೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಹೇಮಂತ್ ಬಂಧನದ ಹಿನ್ನೆಲೆ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ, ಸುರೇಶ್ ಕುಮಾರ ನೇತೃತ್ವದ ನಿಯೋಗ ಡಿಜಿ ನೀಲಮಣಿ ಎನ್. ರಾಜು ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಿಂಬಾವಳಿ, ರಾಜ್ಯ ಸರ್ಕಾರ ಸೇಡಿನ ರಾಜಕೀಯಕ್ಕೆ ಮುಂದಾಗಿದೆ. ರಾಜ್ಯ ಪೊಲೀಸ್ ಇಲಾಖೆ ಗೃಹ ಸಚಿವರ ಒತ್ತಡದ ಅಡಿಯಲ್ಲಿ ಕೆಲಸ ಮಾಡುತ್ತಿದೆ. ನಿನ್ನೆ ಪತ್ರಕರ್ತ ಹೇಮಂತ್ರನ್ನ ಬಿಜೆಪಿ ಕಚೇರಿಗೆ ನುಗ್ಗಿ ಕರೆದುಕೊಂಡು ಹೋಗಿದ್ದಾರೆ. ಯಾವ ಕಾರಣಕ್ಕಾಗಿ ಬಂಧಿಸಿದ್ದಾರೆ ಎಂಬುದು ಗೊತ್ತಿಲ್ಲ. ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸಮಾಡಿದ್ದನ್ನ ಗಮನದಲ್ಲಿಟ್ಟುಕೊಂಡು ಅವರಿಗೆ ತೊಂದರೆ ಕೊಡುವ ಕೆಲಸ ರಾಜ್ಯ ಗೃಹ ಇಲಾಖೆಯ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ಅರೋಪಿಸಿದರು.
ಶಾಸಕ ಸುರೇಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಗೃಹ ಸಚಿವರೇ ಇಲ್ಲ. ಇರುವುದು ಕಾಂಗ್ರೆಸ್ ಗೃಹ ಸಚಿವರು. ಎಂ.ಬಿ.ಪಾಟೀಲರು ಹಿಂದಿನ ಸರ್ಕಾರದಲ್ಲಿ ಇದ್ದಾಗ ಏನು ಮಾಡಿದ್ರು. ಧರ್ಮ ಒಡೆಯುವ ಕೆಲಸ ಹೇಗೆ ಮಾಡಿದ್ರು ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಅವರು ಸೇಡಿನ ರಾಜಕೀಯ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ನಾವು ಇದನ್ನು ಇಲ್ಲಿಗೆ ಬಿಡುವುದಿಲ್ಲ. ಕೇಂದ್ರದವರೆಗೂ ತೆಗೆದುಕೊಂಡು ಹೋಗುತ್ತೇವೆ ಎಂದರು.