ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶದ ಮರುಪರಿಶೀಲನೆಗೆ ಅರ್ಜಿ ಸಲ್ಲಿಸುವ ರಾಜ್ಯ ಸರ್ಕಾರದ ನಿಲುವು ಸ್ವಾಗತಾರ್ಹ. ನದಿ ಪಾತ್ರದ ನಾಲ್ಕು ರಾಜ್ಯಗಳು ಕುಳಿತು ಮಾತುಕತೆ ಮೂಲಕ ಸಂಕಷ್ಟ ಸೂತ್ರ ರೂಪಿಸಿದಲ್ಲಿ ಮಾತ್ರ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಶಾಶ್ವತವಾಗಿ ತೆರೆ ಎಳೆಯಲು ಸಾಧ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಕುಮಾರಪಾರ್ಕ್‌ನಲ್ಲಿರುವ ಚಿತ್ರಕಲಾ ಪರಿಷತ್‌ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವಾಗ ಮಳೆ ಕಡಿಮೆಯಾಗುತ್ತದೋ ಆಗ ಕಾವೇರಿ ನದಿ ನೀರಿನ ವಿವಾದ ಸದ್ದು ಮಾಡುತ್ತದೆ. ಮಳೆಗಾಲ ಕ್ಷೀಣಿಸಿದಾಗ ತಮಿಳುನಾಡಿಗೆ ನೀರು ಬಿಡಬೇಕು ಎನ್ನುವ ಒತ್ತಡ ಬರುತ್ತದೆ. ತಮಿಳುನಾಡಿನವರ ಹೇಳಿಕೆಗಳು ಬಹಳ ಮಟ್ಟಿಗೆ ವಸ್ತುಸ್ಥಿತಿಯನ್ನು ನಾಚಿಸುವಂತಿರುತ್ತವೆ. ಕರ್ನಾಟಕ ಸರ್ಕಾರ ಈ ವಿಚಾರದಲ್ಲಿ ತೆಗೆದುಕೊಡಿರುವ ನಿಲುವನ್ನು ನಾನು ಸಮರ್ಥಿಸುತ್ತೇನೆ ಎಂದರು.
ನಾನು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿಯೂ ಕೂಡ ಇಂತಹ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಅಂದಿನ ಪ್ರಧಾನಿ ವಾಜಪೇಯಿ ಅವರು ಸಭೆ ಉಭಯ ಮುಖ್ಯಮಂತ್ರಿಗಳ ಜೊತೆ ಹಲವು ಸಭೆ ಮಾಡಿ ಸಂಧಾನಕ್ಕೆ ಯತ್ನಿಸಿದರು. ಆದರೆ ಅದು ಸಫಲವಾಗಲಿಲ್ಲ. ಅಂತಿಮವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಬೇಕಾಯಿತು. ಈಗ ನಮ್ಮ ಸರ್ಕಾರದ ನಿಲುವಿನಿಂದ ನನಗೆ ಬಹಳ ಸಮಾಧಾನವಾಗಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ನ್ಯಾಯ ಮೂರ್ತಿ ಆಗಿದ್ದವರ ಸಲಹೆ ಪಡೆದು ಮುಂದಿನ ಹೆಜ್ಜೆ ಇಡುತ್ತಿದ್ದಾರೆ. ಅದೇ ರೀತಿ ಮುಂದುವರೆಯಬೇಕು ಎಂದು ಹೇಳಿದರು.
ಈ ವಿವಾದಕ್ಕೆ ಅಂತಿಮವಾದ ತೆರೆಯನ್ನು ನಾವು ಎಳೆಯಬಹುದು. ಆದರೆ ಅದಕ್ಕಾಗಿ ಸಂಕಷ್ಟ ಸೂತ್ರವನ್ನು ರಚಿಸಬೇಕಿದೆ. ಕಾವೇರಿ ನದಿ ನೀರಿನ ಪಾಲುದಾರರಾಗಿರುವ ಕರ್ನಾಟಕ, ತಮಿಳುನಾಡು, ಪುದುಚೇರಿ, ಕೇರಳ ನಾಲ್ಕು ರಾಜ್ಯಗಳು ಚರ್ಚೆ ಮಾಡಿ ನಂತರ ಒಂದು ಸಂಕಷ್ಟ ಸೂತ್ರವನ್ನು ರೂಪಿಸಬೇಕು. ಅದರ ಚೌಕಟ್ಟಿನಲ್ಲಿ ನದಿ ನೀರಿನ ನಿರ್ವಹಣೆ ಬಗ್ಗೆ ಯೋಗ್ಯ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವುದು ಔಚಿತ್ಯ ಎಂದು ಮಾಜಿ ಸಿಎಂ ತಿಳಿಸಿದರು.
ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ಜನ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಪ್ರತಿಭಟನೆಗಳೆಲ್ಲವೂ ಸ್ವಾಭಾವಿಕವಾಗಿ ಜನ ಸ್ವಯಂ ಪ್ರೇರಣೆಯಿಂದ ಮಾಡಿದ್ದು ಆ ಮೂಲಕ ತಮ್ಮ ನಿಲುವು ಸ್ಪಷ್ಟಪಡಿಸುತ್ತಿದ್ದಾರೆ ಎಂದರು.
ಇನ್ನು, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳ ಎನ್ಡಿಎ ಸೇರಿದ ನಂತರದಲ್ಲಿನ ರಾಜಕೀಯ ಬೆಳವಣಿಗೆ, ಪರಿಣಾಮಗಳ ಕುರಿತು ಪ್ರತಿಕ್ರಿಯೆಗೆ ನಿರಾಕರಿಸಿದ ಎಸ್.ಎಂ.ಕೃಷ್ಣ, ನಾನು ಸಕ್ರಿಯ ರಾಜಕಾರಣದಲ್ಲಿ ಇಲ್ಲ. ಹಾಗಾಗಿ ಈ ವಿಚಾರದಲ್ಲಿ ನನ್ನ ನಿಲುವು ಅಪ್ರಸ್ತುತ ಎಂದು ತಿಳಿಸಿದರು.
ಇದನ್ನೂ ಓದಿ : ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರ, ಬಿಜೆಪಿ ಕರ್ನಾಟಕದ ಜೊತೆಗಿದೆ: ಕೇಂದ್ರ ಸಚಿವ ನಾರಾಯಣಸ್ವಾಮಿ