ಬೆಂಗಳೂರು: ರಾಷ್ಟದಲ್ಲಿಯೇ ಮಾದರಿ ಸಾಂವಿಧಾನಿಕ ಸಂಸ್ಥೆಯಾಗಿ ಬೇರೆ ರಾಜ್ಯಗಳಿಗೆ ಅನುಕರಣೀಯವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕರ್ನಾಟಕ ಲೋಕಯುಕ್ತ ಸಂಸ್ಥೆಗೆ ಮತ್ತೆ ಶಕ್ತಿ ತುಂಬಲು ಹೈಕೋರ್ಟ್ ತೀರ್ಪು ಬಹಳ ಸಹಕಾರಿಯಾಗಿದ್ದು, ತುಂಬು ಹೃದಯದಿಂದ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ತಿಳಿಸಿದ್ದಾರೆ.
ಎಸಿಬಿ ರದ್ದು ಪಡಿಸಿ ಲೋಕಾಯುಕ್ತ ಸಂಸ್ಥೆಗೆ ಬಲ ನೀಡಿದ ನ್ಯಾಯಾಲಯದ ತೀರ್ಪು ಸ್ವಾಗತಿಸಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಎಸ್ಎಂ ಕೃಷ್ಣ ಅವರು, ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಗಳಾಗಿದ್ದಾಗ ಪ್ರಾರಂಭಗೊಂಡು ನಾನು ಮುಖ್ಯಮಂತ್ರಿಗಳಾಗಿದ್ದಾಗ, ದಿ. ನ್ಯಾಯಮೂರ್ತಿ ಎನ್ ವೆಂಕಟಾಚಲ ಅವರು ಮತ್ತು ನ್ಯಾ. ಸಂತೋಷ ಹೆಗ್ಡೆ ಪರಿಶ್ರಮದಿಂದ ಲೋಕಾಯುಕ್ತ ಸಂಸ್ಥೆ ದೇಶದ ಗಮನ ಸೆಳೆದಿತ್ತು.
ಕಳೆದ ಕೆಲವು ವರ್ಷಗಳ ಹಿಂದೆ ಪರ್ಯಾಯವಾಗಿ ಸ್ಥಾಪಿತವಾದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಿಂದ ಲೋಕಾಯುಕ್ತ ಸಂಸ್ಥೆ ತನ್ನ ಘನತೆಯನ್ನು ಕಳೆದುಕೊಂಡಿತು. ಎಸಿಬಿಯಂತಹ ಕೃತಕ ಸಂಸ್ಥೆಯ ಜನನದಿಂದ ಜನರು ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡು ನ್ಯಾಯ ದೊರೆಯುವ ವಿಶ್ವಾಸ ಇಲ್ಲದೇ ಹತಾಶರಾಗಿದ್ದರು ಎಂದು ಹೇಳಿದ್ದಾರೆ.
ಕಳೆದ ತಿಂಗಳು ಹೈಕೋರ್ಟ್ ಎಸಿಬಿಯಲ್ಲಿನ ಭ್ರಷ್ಟ ವ್ಯವಸ್ಥೆ ಬಗ್ಗೆ ಬಲವಾದ ಛಾಟಿ ಬೀಸಿ ಗಮನ ಸೆಳೆದಿದ್ದು ಜನರ ಸೃತಿ ಪಟಲದಲ್ಲಿ ಇದೆ. ಹೈಕೋರ್ಟ್ ತೀರ್ಪುನಿಂದ ಮತ್ತೆ ಜನರ ದೃಷ್ಟಿ ಲೋಕಾಯುಕ್ತ ಸಂಸ್ಥೆ ಮೇಲೆ ನೆಟ್ಟಿದೆ. ನ್ಯಾಯಾಲಯದ ಮೇಲೆ ವಿಶ್ವಾಸ ಮೂಡಿಸಿ ನ್ಯಾಯ ದೊರೆಯುವ ವಿಶ್ವಾಸ ಇಮ್ಮಡಿಗೊಳಿಸಿದೆ. ಇಂತಹ ತೀರ್ಪು ನೀಡಿದ ನ್ಯಾಯಾಲಯಕ್ಕೆ ನನ್ನ ಅಭಿನಂದನೆಗಳು ಹಾಗೂ ಮತ್ತೆ ಲೋಕಾಯುಕ್ತ ಸಂಸ್ಥೆ ರಾಷ್ಟ್ರದಲ್ಲಿ ಮಾದರಿ ಸಂಸ್ಥೆಯಾಗಿ ರೂಪಿತವಾಗಿ ಜನರ ಸೇವೆ ಮಾಡಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.
ಸುದೀರ್ಘ ಹೋರಾಟಕ್ಕೆ ಯಶಸ್ಸು: ಎಸಿಬಿ ರದ್ದು ಪಡಿಸಿದ ಹೈಕೋರ್ಟ್ ಆದೇಶವನ್ನು ಆಮ್ ಆದ್ಮಿ ಪಾರ್ಟಿ ಸ್ವಾಗತಿಸಿದೆ. ಆರು ವರ್ಷಗಳ ಸುದೀರ್ಘ ಹೋರಾಟಕ್ಕೆ ಕೊನೆಗೂ ಯಶಸ್ಸು ಸಿಕ್ಕಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರಕಟಣೆ ಬಿಡುಗಡೆ ಮಾಡಿರುವ ಪೃಥ್ವಿರೆಡ್ಡಿ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು 2016ರಲ್ಲಿ ಲೋಕಾಯುಕ್ತದ ಅಧಿಕಾರವನ್ನು ಮೊಟಕುಗೊಳಿಸಿ ಎಸಿಬಿ ರಚಿಸಿದಾಗ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಾರ್ಟಿ ನಾಯಕರು ಎಂಟು ದಿನಗಳ ಉಪವಾಸ ಸತ್ಯಾಗ್ರಹ ಮಾಡಿದ್ದೆವು. ನಂತರ ಸಿದ್ದರಾಮಯ್ಯ ಜೊತೆ ಎಎಪಿ ನಿಯೋಗವು ಚರ್ಚಿಸಿದ್ದರೂ ಮಾತುಕತೆ ಫಲಪ್ರದವಾಗಿರಲಿಲ್ಲ. ಕಳೆದ ಆರು ವರ್ಷಗಳಲ್ಲಿ ಎಸಿಬಿ ರದ್ದುಪಡಿಸಬೇಕೆಂದು ಆಗ್ರಹಿಸಿ ಎಎಪಿ ನಾನಾ ರೀತಿಯ ಹೋರಾಟ ಮಾಡಿದೆ. ಈಗ ಹೈಕೋರ್ಟ್ ಮಧ್ಯಪ್ರವೇಶಿಸಿ ಎಸಿಬಿಯನ್ನು ವಜಾ ಮಾಡಿ, ಅಲ್ಲಿನ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿರುವುದು ಸಂತಸ ತಂದಿದೆ ಎಂದಿದ್ದಾರೆ.
ಇದನ್ನೂ ಓದಿ: ಭ್ರಷ್ಟಾಚಾರ ನಿಗ್ರಹ ದಳದ ಎಲ್ಲ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆ
ಕೇವಲ ಎಸಿಬಿಯನ್ನು ವಜಾ ಮಾಡಿದರೆ ಸಾಲದು. ಲೋಕಾಯುಕ್ತ ಸಂಸ್ಥೆಗೆ ಹಿಂದೆ ಇದ್ದಂತಹ ಪರಮಾಧಿಕಾರ ಮರಳಿ ಸಿಗಬೇಕು. ಆದರೆ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರವು ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಲಿದೆ ಎಂದು ನಿರೀಕ್ಷಿಸುವುದು ಕೂಡ ಅಸಾಧ್ಯ. ಅಧಿಕಾರ ಸಿಕ್ಕರೆ ಮೊದಲ ಸಚಿವ ಸಂಪುಟದಲ್ಲೇ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದ ಬಿಜೆಪಿಯು ಮೂರು ವರ್ಷವಾದರೂ ಈ ಕುರಿತು ಕ್ರಮ ಕೈಗೊಂಡಿಲ್ಲ. ಲೋಕಾಯುಕ್ತವು ಸರ್ಕಾರದ ಕೈಗೊಂಬೆಯಾಗಿರಬೇಕೆಂದು ಬಿಜೆಪಿ ಸರ್ಕಾರ ಬಯಸುತ್ತಿದೆ ಎಂದು ಹೇಳಿದ್ದಾರೆ.
ಸರ್ಕಾರ ಮಾಡಬೇಕಿದ್ದ ಕೆಲಸ ಹೈಕೋರ್ಟ್ ಮಾಡಿದೆ: ರಾಜ್ಯ ಸರ್ಕಾರವು ಎಂದೋ ಮಾಡಬೇಕಿದ್ದ ಕೆಲಸವನ್ನು ಹೈಕೋರ್ಟ್ ಇಂದು ಮಾಡಿದೆ. ಭ್ರಷ್ಟಾಚಾರ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಇವೆರಡೂ ಪಕ್ಷಗಳು ಭ್ರಷ್ಟಾಚಾರವನ್ನು ಪೋಷಿಸುತ್ತವೆಯೇ ಹೊರತು ಪ್ರಾಮಾಣಿಕ ಆಡಳಿತ ನೀಡಬೇಕೆಂಬ ಬದ್ಧತೆಯಿಲ್ಲ. ಇನ್ನಾದರೂ ಲೋಕಾಯುಕ್ತ ಸಂಸ್ಥೆಯು ಬಲಗೊಂಡು ಭ್ರಷ್ಟ ಜನಪ್ರತಿನಿಧಿಗಳು ಹಾಗೂ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆಯಾಗುವಂತಹ ವ್ಯವಸ್ಥೆ ಜಾರಿಗೆ ಬರಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಎಸಿಬಿ ರಚನೆ ರದ್ದುಪಡಿಸಿ ಹೈಕೋರ್ಟ್ ಆದೇಶ