ಬೆಂಗಳೂರು: ಇದೊಂದು ಜನ ವಿರೋಧಿ, ಅಭಿವೃದ್ಧಿ ವಿರೋಧಿ, ರಾಜ್ಯವನ್ನು ದಿವಾಳಿ ಮಾಡುವಂತಹ, ಗೊತ್ತುಗುರಿ ಇಲ್ಲದ ಆಯವ್ಯಯ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಆಯವ್ಯಯ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂದು ಯಡಿಯೂರಪ್ಪ ಮಂಡಿಸಿರುವ ಆಯವ್ಯಯ ಅಭಿವೃದ್ಧಿಗೆ ಪೂರಕವಾಗಿಲ್ಲ. ಯಾವುದೇ ಗೊತ್ತುಗುರಿ ನೋಡಲು ಸಾಧ್ಯವಾಗಲಿಲ್ಲ. ಇದೊಂದು ಟೊಳ್ಳು ಬಜೆಟ್. ನಮ್ಮ ಬಜೆಟ್ಗಳಲ್ಲಿ ತೋರಿಸುತ್ತಿದ್ದ ಪಾರದರ್ಶಕತೆ ಇಲ್ಲಿ ಕಾಣುತ್ತಿಲ್ಲ. ವಲಯಗಳನ್ನಾಗಿ ವಿಂಗಡಿಸಿ ಗೊಂದಲ ಮೂಡಿಸುವ ಕಾರ್ಯ ಮಾಡಲಾಗಿದೆ ಎಂದು ಆರೋಪಿಸಿದರು.
ಇಂದು ಬಜೆಟ್ ಕಲಾಪವನ್ನು ನಾವು ಬಹಿಷ್ಕರಿಸಿದ್ದೆವು. ಅನೈತಿಕ ಸರ್ಕಾರದ ಬಜೆಟ್ ಕೇಳಬಾರದೆಂದು ವಾಕ್ ಔಟ್ ಮಾಡಿದೆವು. ನಮ್ಮ ಅಗತ್ಯಕ್ಕಿಂತ ಖರ್ಚಿನ ಪ್ರಮಾಣ ಹೆಚ್ಚಾಗಿದೆ. ಇದನ್ನು ಯಡಿಯೂರಪ್ಪ ಒಳ್ಳೇ ಬಜೆಟ್ ಅಂತಾನಾ? ಯಾವ ದೃಷ್ಟಿಕೋನದಲ್ಲಿ ಇದು ಒಳ್ಳೆಯ ಬಜೆಟ್? ಈ ವರ್ಷದ ಬಜೆಟ್ ದಿವಾಳಿ ಬಜೆಟ್. ಹೋಗ್ಲಿ ಅಭಿವೃದ್ಧಿ ಕೆಲಸಕ್ಕೆ ದುಡ್ಡು ಕೊಟ್ಟಿದ್ದಾರಾ? 31 ಸಾವಿರ ಕೋಟಿ ಇಟ್ಟಿದ್ದಾರೆ. ಕಳೆದ ವರ್ಷಕ್ಕಿಂತ ತುಂಬಾ ಕಡಿಮೆಯಾಯ್ತು ಎಂದರು.
ಪ್ರತಿಯೊಂದು ಪೈಸೆಗೂ ಲೆಕ್ಕವಿರಬೇಕು. ಇಲ್ಲಿ ಪಾರದರ್ಶಕತೆ ಉಳಿಸಿಕೊಂಡಿಲ್ಲ. ಕಳೆದ ವರ್ಷ 143 ಕೋಟಿ 35 ಲಕ್ಷ ಬಜೆಟ್ ಅಂದಿದ್ದರು. ಅಯವ್ಯಯ ಅಂದಾಜು ಬಜೆಟ್ ಮಾಡಿದ್ದರು. ಪರಿಷ್ಕೃತ ಅಂದಾಜು ಪ್ರಕಾರ ರೆವಿನ್ಯೂ 19,485 ಕೋಟಿ 84 ಲಕ್ಷ ರೂ. ಕೊರತೆ ತೋರಿಸಿದ್ದಾರೆ. 15,133.60 ಕೋಟಿ ಮೈನಸ್ ಇದೆ. ಈಗ ಸಾಲ ತಂದು ಮೈನಸ್ ರೆವಿನ್ಯೂ ತುಂಬಬೇಕು. ಇವತ್ತು ಸಾಲ ಮಾಡಿ ರೆವಿನ್ಯೂಗೆ ಕೊಡಬೇಕಿದೆ. ನಮ್ಮಕಾಲದಲ್ಲಿ ರೆವಿನ್ಯೂ ಸರ್ಪ್ಲಸ್ ಇರ್ತಿತ್ತು. ನಾವು ರೆವಿನ್ಯೂ ಉಳಿಸಿಕೊಂಡೇ ಮಂಡಿಸುತ್ತಿದ್ದೆವು.
19 ಸಾವಿರ ಕೋಟಿ ಕಡಿಮೆಯೇ? ನಮ್ಮ ಅವಧಿಯಲ್ಲಿ 144 ಕೋಟಿ ರೆವಿನ್ಯೂ ಸರ್ಪ್ಲಸ್ ಇರ್ತಿತ್ತು. ಈಗ 19 ಸಾವಿರ ಕೋಟಿ ಅಂದರೆ ಕಡಿಮೆಯೇ? ಈಗ 71,323 ಕೋಟಿ ಸಾಲ ತೆಗೆದುಕೊಳ್ಳಲು ಹೊರಟಿದ್ದಾರೆ. ಮುಂದಿನ ವರ್ಷ ಇನ್ನಷ್ಟು ತೆಗೆದುಕೊಳ್ತಾರೆ. ರಾಜ್ಯದ ಒಟ್ಟು ಸಾಲ 4,57,889 ಕೋಟಿ ಉಳಿಯಲಿದೆ. ನಾನು ಮೊದಲು 1.36 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದೆ. 2.42 ಲಕ್ಷ ಕೋಟಿ ಕೊನೆಯ ಬಜೆಟ್. ಆಡಳಿತ ಸುಧಾರಣೆಗೆ 40 ಸಾವಿರ ಕೋಟಿ ಇಟ್ಟಿದ್ದಾರೆ. ಇಷ್ಟು ದೊಡ್ಡ ಮೊತ್ತ ಅದೇಗೆ ಇಟ್ಟಿದ್ದಾರೋ ಗೊತ್ತಿಲ್ಲ. ಇಷ್ಟು ಹಣ ಇದ್ಯೋ ಇಲ್ವೋ ಅರ್ಥವಾಗ್ತಿಲ್ಲ ಎಂದಿದ್ದಾರೆ.
ಪರಿಶಿಷ್ಟರ ಎಎಸ್ಪಿ, ಟಿಎಸ್ಪಿಗೆ ಹಣ ಹೆಚ್ಚಿಡಬೇಕು. ಜನಸಂಖ್ಯೆಗನುಗುಣವಾಗಿ ಇದಕ್ಕೆ ಹಣ ಮೀಸಲಿಡಬೇಕು. ಇವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡ್ತಾರೆ. ಬಜೆಟ್ ಹೆಚ್ಚಾದಂತೆ ಈ ಹಣವೂ ಹೆಚ್ಚಿಡಬೇಕು. ಆದರೆ ಈ ಎಎಸ್ಪಿ, ಟಿಎಸ್ಪಿ ಹಣ 2,505 ಕೋಟಿ ಇಟ್ಟಿದ್ದಾರೆ. ಈ ವರ್ಷ 20 ಸಾವಿರ ಕೋಟಿಯೂ ಖರ್ಚು ಮಾಡಲ್ಲ. ನಾನು 33 ಸಾವಿರ ಕೋಟಿ ಬಜೆಟ್ನಲ್ಲಿಟ್ಟಿದ್ದೆ ಎಂದರು.
ರಾಜ್ಯದಲ್ಲಿ 16-18 ಅಭಿವೃದ್ಧಿ ನಿಗಮಗಳಿವೆ. ಇವರೆಲ್ಲರೂ ತಳ ಸಮುದಾಯಗಳು. ಬಡತನದಲ್ಲೇ ಬಳಲುತ್ತಿರುವವರು. ಇವರಿಗೆ ಒಟ್ಟು 500 ಕೋಟಿ ರೂ. ಹಣ ಇಡಲಾಗಿದೆ. ತಲಾ ನಿಗಮಕ್ಕೆ 30 ಕೋಟಿ ಸಿಗಲಿದೆ. ಲಿಂಗಾಯತ, ಒಕ್ಕಲಿಗ ನಿಗಮಕ್ಕೆ ತಲಾ 500 ಕೋಟಿ ಇಡಲಾಗಿದೆ. ನಾವು ಅವರಿಗೆ ಕೊಡಬೇಡಿ ಎಂದು ಹೇಳಲ್ಲ. ಉಳಿದ ಸಣ್ಣ ನಿಗಮಕ್ಕೂ ಹಣ ಕೊಡಬೇಕಲ್ವಾ? ತುಳಿತಕ್ಕೊಳಗಾದವರಿಗೆ ಅನ್ಯಾಯ ಮಾಡಿದ್ದೀರಲ್ಲ. ನೀವು ಸಾಮಾಜಿಕ ನ್ಯಾಯದ ವಿರೋಧಿಗಳಲ್ವೇ..? ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯರನ್ನು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕೂರಿಸುತ್ತೇನೆ: ಸಿಎಂ ಯಡಿಯೂರಪ್ಪ ಸವಾಲು