ಬೆಂಗಳೂರು: ನೆರೆ ಸಮಸ್ಯೆಯಿಂದಾಗಿ ತತ್ತರಿಸಿರುವ ಕರ್ನಾಟಕಕ್ಕೆ ನೆರವು ಒದಗಿಸುವ ವಿಚಾರದಲ್ಲಿ ಪ್ರಧಾನಿ ವಿಳಂಬ ಧೋರಣೆ ತಳೆದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಸಂಬಂಧ ಇಂದು ಟ್ವೀಟ್ ಮಾಡಿರುವ ಅವರು, ಬಿಹಾರ ಪ್ರವಾಹದ ಬಗ್ಗೆ ಮಿಡಿದ ಪ್ರಧಾನಿ ನರೇಂದ್ರ ಮೋದಿ ಅವರ 52 ಇಂಚಿನ ಎದೆ, ಕರ್ನಾಟಕದ ನೆರೆ ಸಂತ್ರಸ್ತರ ಬಗ್ಗೆ ಕಲ್ಲುಬಂಡೆ ಆಗಿದ್ದು ಯಾಕೆ? ಇದು 25 ಸಂಸದರನ್ನು ಆಯ್ಕೆ ಮಾಡಿ ಕಳಿಸಿದ ಕರ್ನಾಟಕದ ಬಗ್ಗೆ ತಾತ್ಸಾರವೇ? ಇಲ್ಲ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬಗ್ಗೆ ದ್ವೇಷವೇ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದ ಕೆಲವು ಭಾಗಗಳು ಪ್ರವಾಹದಿಂದ ಬಳಲುತ್ತಿದ್ದು, ಇದೀಗ 60 ದಿನಗಳೇ ಕಳೆದುಹೋಗಿವೆ. ಇವರಿಗೆ ಆಶ್ರಯವಿಲ್ಲ, ತಿನ್ನಲು ಏನೂ ಇಲ್ಲ, ದನಕರುಗಳು ಸಾಯುತ್ತಿವೆ, ಬೆಳೆಗಳು ಕಳೆದುಹೋಗಿವೆ. ಆದರೆ ನರೇಂದ್ರ ಮೋದಿಯಿಂದ ಪ್ರತಿಕ್ರಿಯೆ ಸಿಗದಂತಾಗಿದೆ. ಕರ್ನಾಟಕದ ಬಗ್ಗೆ ಈ ದ್ವೇಷ ಏಕೆ? ಕರ್ನಾಟಕದಿಂದ ಆಯ್ಕೆಯಾದ ಬಿಜೆಪಿಯ 25 ಸಂಸದರು ಏನು ಮಾಡುತ್ತಿದ್ದಾರೆ? ನರೇಂದ್ರ ಮೋದಿ ಅವರು ಕಾಣೆಯಾಗಿದ್ದಾರೆ ದಯವಿಟ್ಟು ಅವರನ್ನು ಹುಡುಕಲು ನಮಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.