ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಅವರು ಜಾತಿ ಕುರಿತಾಗಿ ಹೇಳಿಕೆ ನೀಡಿರುವುದು ಖಂಡನೀಯ. ಅವರು ಅಷ್ಟು ಕೀಳು ಮಟ್ಟಕ್ಕೆ ಹೋಗಿದ್ದು ಸರಿಯಲ್ಲ. ಈ ಬಗ್ಗೆ ಕ್ಷಮೆಯಾಚಿಸಬೇಕು ಎಂದು ಉನ್ನತ ಶಿಕ್ಷಣ ಹಾಗೂ ಐಟಿ & ಬಿಟಿ ಸಚಿವ ಡಾ ಸಿ ಎನ್ ಅಶ್ವತ್ಥನಾರಾಯಣ್ ಆಗ್ರಹಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ವಿರುದ್ಧ ಕೊಟ್ಟ ಹೇಳಿಕೆಗೆ ಮಾಜಿ ಸಿಎಂ ಎಚ್ಡಿಕೆ ಕ್ಷಮೆ ಯಾಚಿಸುವುದು ಸೂಕ್ತ. ನಮ್ಮದು ಜಾತಿ ಮೀರಿದ ಪಕ್ಷವಾಗಿದೆ. ನಮ್ಮದು ಕನ್ನಡಿಗರ, ಭಾರತೀಯರ ಪಕ್ಷ. ಅವರು ಅಷ್ಟು ಕೀಳು ಮಟ್ಟಕ್ಕೆ ಹೋಗಿರುವುದು ನಿಜಕ್ಕೂ ಆಶ್ಚರ್ಯಕರ. ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಬಿಜೆಪಿ ಜಾತ್ಯತೀತ ಪಕ್ಷವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಿಎಂ ಸ್ಥಾನಕ್ಕೆ ಅರ್ಹರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸಿಎಂ ಆಗುವ ಅರ್ಹತೆ ಇದೆ. ಅದರ ಬಗ್ಗೆ ಯಾರಿಗೂ ಯಾವುದೇ ಅನುಮಾನ ಇಲ್ಲ. ನಮ್ಮಲ್ಲಿ ಯಾರು ಬೇಕಾದರೂ ಸಿಎಂ ಆಗಬಹುದು ಎಂದು ಉನ್ನತ ಶಿಕ್ಷಣ ಸಚಿವರು ಸಮರ್ಥಿಸಿಕೊಂಡರು. ಆದರೆ ಕಾಂಗ್ರೆಸ್, ಜೆಡಿಎಸ್ ನಲ್ಲಿ ಇದು ಇದೆಯಾ.?. ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ, ಜೆಡಿಎಸ್ ನಲ್ಲಿ ಕುಮಾರಸ್ವಾಮಿನೇ ಸಿಎಂ ಆಗಬೇಕು. ಆದರೆ ನಮ್ಮಲ್ಲಿ ಆ ರೀತಿ ಇಲ್ಲ. ಯಾವ ಸಮುದಾಯದವರು ಬೇಕಿದ್ರೂ ಸಿಎಂ ಆಗಬಹುದು ಎಂದ ಅಶ್ವತ್ಥ ನಾರಾಯಣ್, ಕುಮಾರಸ್ವಾಮಿ ಅವರ ಪಕ್ಷದಲ್ಲಿ ಯಾರು ಡಿಸಿಎಂ ಆಗ್ತಾರೆ ಎಂಬುದನ್ನು ಹೇಳಲಿ ಎಂದು ಇದೇ ವೇಳೆ ಒತ್ತಾಯಿಸಿದರು.
ಸಿಎಂ ಬೊಮ್ಮಾಯಿ ಬಿಎಸ್ವೈ ನಾಯಕತ್ವದಲ್ಲಿ ಚುನಾವಣೆ: ಯಾರ ನೇತೃತ್ವದಲ್ಲಿ ಚುನಾವಣೆಗೆ ಹೋಗಬೇಕು ಎಂಬ ವಿಚಾರವಾಗಿ ಮಾತನಾಡಿದ ಅವರು, ನಮಗೆ ರಾಜ್ಯಾಧ್ಯಕ್ಷರು ಇದ್ದಾರೆ. ಮುಖ್ಯಮಂತ್ರಿಗಳು ಇದ್ದಾರೆ. ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗ್ತಿವೆ ಎಂದು ತಿಳಿಸಿದರು. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಚುನಾವಣೆ ಗೆಲ್ಲುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರಂತ ನಾಯಕತ್ವ ನಮಗೆ ಇದೆ. ಇಂಥ ನಾಯಕತ್ವ ಬೇರೆ ಪಾರ್ಟಿಗೆ ಇಲ್ವಲ್ಲ ಎಂದು ವ್ಯಂಗ್ಯವಾಡಿದರು.
ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಅಂತ ಸಚಿವ ಸಂಪುಟ ವಿಸ್ತರಣೆ ಮಾಡಲಿಲ್ಲ ಎಂದು ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮುಲ್ಲಾ ಜಿ ಅವರಿಗೆ 75 ವರ್ಷ ವಯಸ್ಸಾಯ್ತು. ಅವರಿಗೆ ಅರುಳು, ಮರುಳು ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಆಡಳಿತ ಪಕ್ಷ ವಿಪಕ್ಷ ಮಾಡಿದ ಕೀರ್ತಿ: ಸಿಎಂಗೆ ನಾಯಿ ಅನ್ನೋದು, ಕಟೀಲ್‌ಗೆ ಜೋಕರ್ ಅನ್ನೋದು. ಇವರು ಉಗ್ರ ರೂಪದ ಭಾಷಣದಿಂದ ಅವರೇ ಉಗ್ರವಾದಿ ಆಗಿದ್ದಾರೆ. ಆಡಳಿತ ಪಕ್ಷ ಇದ್ದದ್ದನ್ನು, ವಿಪಕ್ಷ ಮಾಡಿದ ಕೀರ್ತಿ ಅವರದ್ದು. ಮರಳು ದಂಧೆ, ಅರ್ಜಿ ಹಾಕದವರನ್ನ ಶಿಕ್ಷಕರನ್ನಾಗಿ ಮಾಡಿರುವುದು ಅವರ ಸಾಧನೆ. ಕತ್ತಲಲ್ಲಿ ಬಜೆಟ್ ಮಂಡಿಸಿದವರು. ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದವರು. ಅವರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಸ್ವಾರ್ಥ ರಾಜಕಾರಣ ಮಾಡಿ, ಬಾಯಿಗೆ ಬಂದಂತೆ ಮಾತನಾಡುವವರು ಸಿದ್ದರಾಮುಲ್ಲಜೀ ಎಂದು ಉನ್ನತ ಶಿಕ್ಷಣ ಸಚಿವರು ವಾಗ್ದಾಳಿ ನಡೆಸಿದರು.
ಸಿಡಿ ಎಕ್ಸ್ಪರ್ಟ್ ಯಾರು ಎಂದು ಸಚಿವರ ಪ್ರಶ್ನೆ?:ಕುಮಾರಸ್ವಾಮಿ ಅವರದ್ದು ಪಂಚರ್ ರತ್ನ ಯಾತ್ರೆ ಇಲ್ಲವೇ ಸಿಡಿ ಯಾತ್ರೆಯನ್ನಾದರೂ ಮಾಡಲಿ. ಸಿಡಿ ಎಕ್ಸ್ಪರ್ಟ್ ಯಾರು?. ಡಿ ಕೆ ಶಿವಕುಮಾರ್ ಯಾರು?. ಜಾರಕಿಹೊಳಿ ಸಿಡಿ ತನಿಖೆ ಆಗಲಿ ಎಂದಿದ್ದಕ್ಕೆ ಇವರು ಗಲಿಬಿಲಿ ಆದ್ರು, ಯಾಕೆ? ಎಂದು ಅಶ್ವತ್ಥ ನಾರಾಯಣ ಪ್ರಶ್ನಿಸಿದರು. ಈ ರಾಜ್ಯದಲ್ಲಿ ಸಿ.ಡಿ. ರಾಜಕಾರಣಿನೇ ಡಿ.ಕೆ.ಶಿವಕುಮಾರ್ ಎಂದು ವಾಗ್ದಾಳಿ ನಡೆಸಿದ ಅಶ್ವತ್ಥ ನಾರಾಯಣ್, ಪಾಪ ರಮೇಶ್ ಜಾರಕಿಹೊಳಿ, ಸಿಡಿ ಬಗ್ಗೆ ತನಿಖೆ ಆಗಬೇಕು ಎಂದು ಕೂಡಲೇ ಶಿವಕುಮಾರ್ ಗೆ ನಡುಕ ಶುರುವಾಗಿದೆ. ಡಿ ಕೆ ಸುರೇಶ್ ಅವರ ಭಾಷೆಯಲ್ಲಿ ಅವರು ಮಾತಾಡ್ತಾರೆ. ಆದರೆ ಅವರ ಮಾತಿಂದ ನನಗೇನು ಆಗೋದಿಲ್ಲ. ಅವರ ಮಾತು ಅವರ ಸಂಸ್ಕೃತಿ ಏನೆಂದು ತೋರಿಸುತ್ತದೆ ಎಂದು ಗುಡುಗಿದರು.
ಇದನ್ನೂಓದಿ:ಭದ್ರಾವತಿಯ ವಿಐಎಸ್ಎಲ್ ಮುಚ್ಚುವ ನಿರ್ಧಾರ ಹಿಂಪಡೆಯಿರಿ: ಪ್ರಧಾನಿಗೆ ಸಿದ್ದರಾಮಯ್ಯ ಮನವಿ