ಬೆಂಗಳೂರು/ಕೋಲ್ಕತಾ: ಮಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಚಾರ ಮಾಡಲಿದ್ದಾರೆ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಇಂದು ಸಂಜೆ ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಕುಮಾರಸ್ವಾಮಿ ಭೇಟಿಯಾಗಿ ಮಹತ್ವದ ಸಮಲೋಚನೆ ನಡೆಸಿದರು. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಮಮತಾ ಬ್ಯಾನರ್ಜಿ ಅವರ ಜೊತೆ ಸುದೀರ್ಘ ಮಾತುಕತೆ ನಡೆಸಲಾಯಿತು. ಮುಂಬರುವ ಕರ್ನಾಟಕದ ವಿಧಾನಸಭೆ ಚುನಾವಣೆ, ರಾಷ್ಟ್ರ ರಾಜಕಾರಣ, ರಾಹುಲ್ ಗಾಂಧಿ ಅನರ್ಹತೆ ಸೇರಿ ಅನೇಕ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಲಾಯಿತು ಎಂದಿದ್ದಾರೆ.
ಈ ಬಾರಿ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆದಾಗಲೂ ಕೇಂದ್ರ ಸರ್ಕಾರ ವಿಪರೀತ ಕಿರುಕುಳ ನೀಡಿತ್ತು. ಆದರೂ ಜನತೆಯ ಆಶೀರ್ವಾದದಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂತು. ಅದೇ ರೀತಿ ಕರ್ನಾಟಕದಲ್ಲಿ ಜೆಡಿಎಸ್ ಕೂಡ ಅಧಿಕಾರಕ್ಕೆ ಬರಲಿದೆ ಎಂದು ಮಮತಾ ಅವರು ಹೇಳಿದ್ದಾಗಿ ಹೆಚ್ಡಿಕೆ ತಿಳಿಸಿದ್ದಾರೆ.
ನೀವು ಯಾವಾಗ ಹೇಳಿದರೂ ನಾನು ಕರ್ನಾಟಕಕ್ಕೆ ಬಂದು ಜೆಡಿಎಸ್ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತೇನೆ. ನೀವು ವೇಳಾಪಟ್ಟಿಯನ್ನು ಸಿದ್ಧಪಡಿಸಿ ತಿಳಿಸಿ ಎಂದು ಟಿಎಂಸಿ ನಾಯಕಿ ಮಮತಾ ಹೇಳಿದ್ದಾರೆ. ಇದರಿಂದ ನನಗೆ ಬಹಳ ಸಂತಸ ಆಗಿದೆ. ಇಂದು ಅವರು ನನ್ನನ್ನು ಅತ್ಯಂತ ಆದರಪೂರ್ವಕವಾಗಿ ಸ್ವಾಗತಿಸಿ ಗೌರವಿಸಿದರು ಎಂದೂ ಮಾಹಿತಿ ನೀಡಿದ್ದಾರೆ.
ಇದೇ 26ರಂದು ಮೈಸೂರಿನಲ್ಲಿ ನಡೆಯಲಿರುವ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾವೇಶದ ಬಗ್ಗೆಯೂ ಮಮತಾ ಅವರು ಮಾಹಿತಿ ಪಡೆದರು. ಅಲ್ಲದೇ, ಕರ್ನಾಟಕದ ರಾಜಕೀಯ ವಿದ್ಯಮಾನಗಳ ಚರ್ಚಿಸಿದರು ಎಂಬುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ಕ್ಷೇತ್ರದಲ್ಲಿ ಇಂದು ಪಂಚರತ್ನ ರಥಯಾತ್ರೆ ಮುಗಿಸಿದ ನಂತರ ಮಾಜಿ ಸಿಎಂ ಹೆಚ್ಡಿಕೆ, ಮಧ್ಯಾಹ್ನ ವಿಶೇಷ ವಿಮಾನದಲ್ಲಿ ಕೋಲ್ಕತಾಗೆ ತೆರಳಿದ್ದರು. ಮಮತಾ ಬ್ಯಾನರ್ಜಿ ಅವರ ಭವಾನಿಪುರ ನಿವಾಸದಲ್ಲಿ ಭೇಟಿಯಾಗಿ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.
ಅಖಿಲೇಶ್, ಪಟ್ನಾಯಕ್ ನಂತರ ಹೆಚ್ಡಿಕೆ ಜೊತೆ ದೀದಿ ಮಾತುಕತೆ: ಟಿಎಂಸಿ ಅಧಿನಾಯಕಿಯಾಗಿರುವ ಮಮತಾ ಬ್ಯಾನರ್ಜಿ ನಿರಂತರವಾಗಿ ವಿವಿಧ ಪಕ್ಷಗಳ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶದ ಮಾಜಿ ಸಿಎಂ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನು ಕಾಲಿಘಾಟ್ ನಿವಾಸದಲ್ಲಿ ಮಮತಾ ಭೇಟಿಯಾಗಿದ್ದರು.
ಅಲ್ಲದೇ, ಇದೇ ವಾರದಲ್ಲಿ ಮೂರು ದಿನಗಳ ಭೇಟಿಗಾಗಿ ಮಮತಾ ಒಡಿಶಾಕ್ಕೆ ತೆರಳಿದ್ದರು. ಅಲ್ಲಿನ ಮುಖ್ಯಮಂತ್ರಿ, ಬಿಜು ಜನತಾ ದಳದ ನಾಯಕರಾದ ನವೀನ್ ಪಟ್ನಾಯಕ್ ಅವರನ್ನು ಭೇಟಿಯಾಗಿದ್ದ ಮಮತಾ ಬ್ಯಾನರ್ಜಿ ಸಮಾಲೋಚನೆ ಸಹ ನಡೆಸಿದ್ದರು. ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ಬಿಜೆಪಿ ವಿರುದ್ಧ ಪ್ರಬಲ ಹೋರಾಟವನ್ನು ರೂಪಿಸಲು ಮಮತಾ ಬ್ಯಾನರ್ಜಿ ಬಯಸುತ್ತಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ವಯನಾಡ್ಗೆ ಉಪಚುನಾವಣೆ, ರಾಹುಲ್ ದೆಹಲಿ ಬಂಗಲೆ ಖಾಲಿ?: ಕೋರ್ಟ್ ಆದೇಶ - ಅನರ್ಹತೆ ಪರಿಣಾಮಗಳೇನು?