ಬೆಂಗಳೂರು: ಬಿಬಿಎಂಪಿ ಹಾಗೂ 2023ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರ ಘಟಕಕ್ಕೆ ಕಾಯಕಲ್ಪ ನೀಡಲು ಜೆಡಿಎಸ್ ಮುಂದಾಗಿದೆ. ಬೆಂಗಳೂರು ನಗರ ಘಟಕವನ್ನು ಪುನಾರಚನೆ ಮಾಡಲು ಉದ್ದೇಶಿಸಲಾಗಿದೆ. ಹಾಗಾಗಿ, ಅದಕ್ಕೆ ಪೂರಕವಾಗಿ ಸಿದ್ಧತೆಗಳು ನಡೆಯುತ್ತಿವೆ.
ಮುಖ್ಯವಾಗಿ, ಮುಂಬರುವ ಬಿಬಿಎಂಪಿ ಹಾಗೂ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡಿರುವ ಮಾಜಿ ಮುಖ್ಯಮಂತ್ರಿ, ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಸ್ವತಃ ಬೆಂಗಳೂರು ಮಹಾನಗರದ ಜೆಡಿಎಸ್ ಉಸ್ತುವಾರಿ ವಹಿಸಿಕೊಳ್ಳಲು ಮುಂದಾಗಿದ್ದಾರೆ. ಅವರ ಉಸ್ತುವಾರಿಯಲ್ಲಿ ಐದು ವಿಭಾಗಗಳನ್ನು ಮಾಡಿ ಪ್ರತಿ ವಿಭಾಗಕ್ಕೂ ಒಬ್ಬ ಅಧ್ಯಕ್ಷರನ್ನು ನೇಮಕ ಮಾಡುವ ಬಗ್ಗೆ ಚಿಂತನೆ ನಡೆದಿದೆ.
ಬೂತ್ ಮಟ್ಟದ ಸಮಿತಿ ರಚನೆ: ಪಕ್ಷದ ಸಂಘಟನೆ, ಜನಪ್ರಿಯತೆ ಸೇರಿದಂತೆ ಎಲ್ಲ ರೀತಿಯಲ್ಲೂ ಸಾಮರ್ಥ್ಯ ಹೊಂದಿರುವವರನ್ನು ವಿಭಾಗ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಉದ್ದೇಶಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ವಿಭಾಗೀಯ ಅಧ್ಯಕ್ಷರ ಅಧೀನದಲ್ಲಿ ಕ್ಷೇತ್ರ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ವಾರ್ಡ್ಗೆ ಒಬ್ಬರಂತೆ ಅಧ್ಯಕ್ಷರನ್ನು ನೇಮಕ ಮಾಡುವುದಲ್ಲದೇ ಬೂತ್ ಮಟ್ಟದ ಸಮಿತಿಯನ್ನು ರಚನೆ ಮಾಡಲಾಗುತ್ತದೆ.
ಆ ಮೂಲಕ ಬೆಂಗಳೂರು ನಗರದಲ್ಲಿ ತಳಮಟ್ಟದಿಂದ ಪಕ್ಷವನ್ನು ಬಲಗೊಳಿಸುವ ಪ್ರಯತ್ನ ಮಾಡಲಾಗುತ್ತದೆ. ಸದ್ಯದಲ್ಲೇ ಎದುರಾಗಲಿರುವ ಬಿಬಿಎಂಪಿ ಚುನಾವಣೆಯಲ್ಲಿ ಹೆಚ್ಚು ಸ್ಥಾನದಲ್ಲಿ ಗೆಲುವು ಸಾಧಿಸುವ ಕಾರ್ಯತಂತ್ರಗಳನ್ನು ರೂಪಿಸಲು ಉದ್ದೇಶಿಸಲಾಗಿದೆ.
ಇದನ್ನೂ ಓದಿ: ಗೋವಾ ಚುನಾವಣೆ: ಎರಡು ದಿನ ಸಿದ್ದರಾಮಯ್ಯ ಪ್ರಚಾರ
2023ಕ್ಕೆ ನಡೆಯುವ ವಿಧಾನಸಭೆ ಚುನಾವಣೆಗೂ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಸೇರಿದಂತೆ ಸಿದ್ದತೆ ಈಗಿನಿಂದಲೇ ಆರಂಭಿಸುವ ಉದ್ದೇಶದಿಂದ ಬೆಂಗಳೂರು ನಗರ ಘಟಕವನ್ನು ಪುನರ್ ರಚನೆ ಮಾಡಲಾಗುತ್ತಿದೆ. ಕಳೆದ 2 ವರ್ಷಗಳಿಂದ ಕೋವಿಡ್‍ನಿಂದಾಗಿ ಪಕ್ಷದ ಕಾರ್ಯಕ್ರಮಗಳು ಅಷ್ಟಾಗಿ ನಗರದಲ್ಲಿ ನಡೆದಿಲ್ಲ. ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬೆಂಗಳೂರು ಅಭಿವೃದ್ಧಿಗೆ ಮಾಡಿರುವ ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್ ನಿಂದ ಪಕ್ಷ ಪುನಶ್ಚೇತನ: ಜೆಡಿಎಸ್ ಪಕ್ಷವನ್ನು ಮತ್ತೆ ಪುನಶ್ಚೇತನಗೊಳಿಸುವ ಕಾರ್ಯವನ್ನು ಮಾರ್ಚ್ ನಿಂದ ಪ್ರಾರಂಭಿಸಲು ನಾಯಕರು ನಿರ್ಧರಿಸಿದ್ದಾರೆ. ಅದೇ ರೀತಿ ರಾಜ್ಯದಲ್ಲಿರುವ ಸಣ್ಣ ಪುಟ್ಟ ಸಂಘಟನೆಗಳನ್ನು ಒಗ್ಗೂಡಿಸಿ ಒಂದು ಪ್ರಾದೇಶಿಕ ನೆಲೆಗಟ್ಟನ್ನು ಒಂದು ಗೂಡಿಸಲು ತೀರ್ಮಾನ ಮಾಡಲಾಗಿದೆ. ರೈತ ಸಂಘ, ನೀರಾವರಿ ಹೋರಾಟಗಾರರು, ಗಡಿನಾಡು ಹೋರಾಟಗಾರರ ಜತೆ ಚರ್ಚಿಸಿ ಹೊಸ ವ್ಯವಸ್ಥೆ ರೂಪಿಸಲಾಗುವುದು ಎಂದು ಹೆಚ್ಡಿಕೆ ಹೇಳಿದ್ದಾರೆ.