ಬೆಂಗಳೂರು: ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ವಿದೇಶ ಪ್ರವಾಸಕ್ಕೆ ತೆರಳಿರುವ ನಡುವೆಯೇ ಬಿಜೆಪಿ ಹಿರಿಯ ನಾಯಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಕುಟುಂಬಸಮೇತ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಉಭಯ ನಾಯಕರ ಫಾರಿನ್ ಟ್ರಿಪ್ ಇದೀಗ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಕುಟುಂಬ ಸದಸ್ಯರು ಗುರುವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಪ್ರಯಾಣಿಸಿದರು. ಯಡಿಯೂರಪ್ಪ ಜೊತೆ ಪುತ್ರ ಹಾಗೂ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಹಾಗೂ ಆಪ್ತ ರುದ್ರೇಶ್ ಇದ್ದರು. ಒಂದು ವಾರದ ಪ್ರವಾಸ ಕೈಗೊಂಡಿದ್ದಾರೆ. ದುಬೈ, ಯೂರೋಪ್ ಪ್ರವಾಸದ ಬಗ್ಗೆ ಕುಟುಂಬ ಮೂಲಗಳಿಂದ ಮಾಹಿತಿ ಸಿಕ್ಕಿದ್ದು, ಮಾಲ್ಡೀವ್ಸ್ ದ್ವೀಪಕ್ಕೂ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ ವಿದೇಶ ಪ್ರವಾಸ: ಇತ್ತೀಚಿನ ವರ್ಷಗಳಲ್ಲಿ ಪ್ರತಿ ವರ್ಷದ ಜೂನ್ನಿಂದ ಆಗಸ್ಟ್ ಸಮಯದಲ್ಲಿ ಯಡಿಯೂರಪ್ಪ ಕುಟುಂಬ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. 2021ರ ಜುಲೈನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಯಡಿಯೂರಪ್ಪ 2021ರ ಆಗಸ್ಟ್ನಲ್ಲಿ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಒಂದು ವಾರ ಕುಟುಂಬದ ಜೊತೆ ಫಾರಿನ್ ಟ್ರಿಪ್ ಎಂಜಾಯ್ ಮಾಡಿದ್ದರು. ಅದೇ ರೀತಿ 2022ರಲ್ಲೂ ವಿದೇಶ ಪ್ರವಾಸ ಹೋಗಿದ್ದರು. 2022ರ ಜೂನ್ 21ರಂದು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದರು. ಕುಟುಂಬಸಮೇತರಾಗಿ ಲಂಡನ್‌ಗೆ ತೆರಳಿದ್ದ ಯಡಿಯೂರಪ್ಪ ಐದು ದಿನಗಳ ಕಾಲ ಪ್ರವಾಸ ಮಾಡಿದ್ದರು. ಇದೀಗ 2023ರ ಜುಲೈನಲ್ಲಿ ಮತ್ತೆ ಯೂರೋಪ್, ದುಬೈ ಪ್ರವಾಸದಲ್ಲಿದ್ದಾರೆ.
ಪ್ರತಿ ವರ್ಷವೂ ಇದೇ ಸಮಯದಲ್ಲಿ ಯಡಿಯೂರಪ್ಪ ಕುಟುಂಬಸಮೇತ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದರೂ ಈ ಬಾರಿಯ ಪ್ರವಾಸ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಕೂಡ ಕುಟುಂಬ ಸಮೇತ ವಿದೇಶದಲ್ಲಿದ್ದಾರೆ. ಈ ಮಧ್ಯೆ ಸಿಂಗಾಪುರ್ನಲ್ಲಿ ಕುಳಿತು ಸರ್ಕಾರ ಉರುಳಿಸಲು ಪ್ರತಿಪಕ್ಷಗಳು ಷಡ್ಯಂತ್ರ ರೂಪಿಸುತ್ತಿವೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಇನ್ನೊಂದೆಡೆ, ಕಾಂಗ್ರೆಸ್ ವಿರುದ್ಧ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸುವ ಚರ್ಚೆಗಳು ನಡೆಯುತ್ತಿವೆ. ಇಂತಹ ಸಮುದಾಯದಲ್ಲಿ ಎರಡೂ ಪಕ್ಷಗಳ ನಾಯಕರು ವಿದೇಶ ಪ್ರವಾಸಕ್ಕೆ ತೆರಳಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: CM Siddaramaiah: ಬೇಕೆಂದೇ ದಾರಿ ತಪ್ಪಿಸುವ ಕೆಲಸ ಮಾಡ್ತಾರೆ, ಹುಷಾರಾಗಿರಿ: ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು