ಬೆಂಗಳೂರು: ಶ್ರೀರಾಮನ ಬಾಲಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಇದೇ ತಿಂಗಳ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ಜರುಗಲಿದೆ. ಇದಕ್ಕಾಗಿ ಸಕಲ ತಯಾರಿಗಳು ನಡೆದಿವೆ. ಮತ್ತೊಂದೆಡೆ ದೇಶಾದ್ಯಂತ ಹಿಂದೂ ಕಾರ್ಯಕರ್ತರು ಅಕ್ಷತೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಅಕ್ಷತೆಕಾಳು ತಮ್ಮ ಸರ್ಕಾರದ ಅನ್ನಭಾಗ್ಯದ ಅಕ್ಕಿಯದ್ದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದು, ಅದಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.
"ಅನ್ನಭಾಗ್ಯದ ಅಕ್ಕಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಕೊಡುತ್ತಿದ್ದು, ರಾಜ್ಯ ಸರ್ಕಾರ ಒಂದು ಕಾಳು ಅಕ್ಕಿಯನ್ನೂ ಕೊಡುತ್ತಿಲ್ಲ. ಅನ್ನಭಾಗ್ಯದ ಶ್ರೇಯಸ್ಸು ನರೇಂದ್ರ ಮೋದಿಯವರಿಗೆ ಸೇರಬೇಕು" ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದ ರಮಾಡ ಹೋಟೆಲ್ನಲ್ಲಿ ಮಾಧ್ಯಮದವರೊಂದಿಗೆ ಅವರು, ಜನರಿಗೆ ಹಂಚುತ್ತಿರುವ ಮಂತ್ರಾಕ್ಷತೆ ಅನ್ನಭಾಗ್ಯದ್ದು ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, "ರಾಜ್ಯ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಹೇಳಿತ್ತು. ಆದರೆ, ಕೇವಲ ಕೇಂದ್ರ ಸರ್ಕಾರ ನೀಡುತ್ತಿರುವ ಐದು ಕೆಜಿ ಅಕ್ಕಿ ಮಾತ್ರ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು ಒಂದು ಕಾಳು ಅಕ್ಕಿಯನ್ನೂ ಕೊಟ್ಟಿಲ್ಲ" ಎಂದರು.
ರಾಮಮಂದಿರ ಉದ್ಘಾಟನೆಯ ದಿನ ರಾಜ್ಯ ಸರ್ಕಾರ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಆದೇಶ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಡಿಸಿಎಂ ಡಿ ಕೆ ಶಿವಕುಮಾರ್ ಅವರು ರಾಮನ ಭಕ್ತ ಎಂದು ಹೇಳುತ್ತಿದ್ದಾರೆ. ಸರ್ಕಾರ ಪೂಜೆ ಮಾಡಿಸುತ್ತಿದೆ. ರಾಮನಿಗೆ ಕಾಂಗ್ರೆಸ್ ತಲೆಬಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ" ಎಂದರು.
ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಬಗ್ಗೆ ನೀಡಿರುವ ಹೇಳಿಕೆಗೆ ವಿಚಾರವಾಗಿ ಮಾತನಾಡಿ, "ಸಚಿವರಾಗಿ ಇದು ಅವರ ಅಪ್ರಬುದ್ಧ ಹೇಳಿಕೆ. ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಇದೆ ಎನ್ನುವುದು ಗೊತ್ತಿರಬೇಕು. ಅವರು ಸಚಿವರಾಗಿರಲು ಅರ್ಹರಲ್ಲ" ಎಂದು ಬೊಮ್ಮಾಯಿ ಹರಿಹಾಯ್ದರು.
ಗ್ಯಾರಂಟಿ ಬಂಡವಾಳ ಬಯಲು - ಆರ್ ಅಶೋಶ್: "ಅನ್ನಭಾಗ್ಯದ ಅಕ್ಕಿಯಲ್ಲಿ ಶ್ರೀರಾಮನ ಮಂತ್ರಾಕ್ಷತೆ ನೀಡಲಾಗುತ್ತಿದೆ ಎಂದು ಸುಳ್ಳು ಹೇಳುತ್ತೀರಲ್ಲಾ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೇ, ಆ ಶ್ರೀ ರಾಮ ಮೆಚ್ಚುವನೇ?. ಪಡಿತರ ರಸೀತಿಯಲ್ಲಿ ರಾಜ್ಯ ಸರ್ಕಾರದ ಕೊಡುಗೆ ಶೂನ್ಯ ಎಂದು ಸ್ಪಷ್ಟವಾಗಿ ನಮೂದಿಸಿದೆ. ತಮ್ಮ ಗ್ಯಾರಂಟಿಗಳ ಬಂಡವಾಳ ಬಯಲಾಗಿದೆ. ಇನ್ನೆಷ್ಟು ದಿನ ಹೀಗೆ ಜನರನ್ನು ಯಾಮಾರಿಸುವ ಪ್ರಯತ್ನ ಮಾಡುತ್ತೀರಿ?" ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಎಕ್ಸ್ ಖಾತೆ(ಹಿಂದಿನ ಟ್ಟಿಟ್ಟರ್) ಮೂಲಕ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಗೆಲ್ಲುವ ರೂಪುರೇಷೆ ಕುರಿತು ಚರ್ಚೆ, ಸೀಟು ಹಂಚಿಕೆ ಹೈಕಮಾಂಡ್ ನಿರ್ಧಾರ: ಸಿ ಟಿ ರವಿ