ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ 150 ಸೀಟು ಗೆಲ್ಲುತ್ತದೆ ಎಂದು ರಕ್ತದಲ್ಲಿ ಬರೆದುಕೊಡುತ್ತೀನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಪಾಪ ಡಿ.ಕೆ. ಶಿವಕುಮಾರ್ ರಕ್ತದಲ್ಲಿ ಬರೆದುಕೊಡೋದು ಬೇಡ. ಆಮೇಲೆ ರಕ್ತದ ಕೊರತೆ ಆದರೆ ಕಷ್ಟ ಎಂದಿದ್ದಾರೆ.
ಪದ್ಮನಾಭನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಯಡಿಯೂರಪ್ಪ ನೋಡಿದ್ರೆ ಜಗದೀಶ್ ಶೆಟ್ಟರ್ ಸೋಲ್ತಾರೆ ಅಂತ ರಕ್ತದಲ್ಲಿ ಬರೆದು ಕೊಡ್ತೀನಿ ಅಂತಾರೆ". ಯಾವ ನಾಯಕರು ರಕ್ತ ಕೊರತೆ ಮಾಡಿಕೊಳ್ಳೋದು ಬೇಡ. ನೀವು ಹೇಳೋದು, ರಕ್ತದಲ್ಲಿ ಬರೆದು ಕೊಡೋದು ಮುಖ್ಯ ಅಲ್ಲ. ಜನ ನಿರ್ಧಾರ ಮಾಡಬೇಕು. ಡಿ ಕೆ ಶಿವಕುಮಾರ್ ಅಲ್ಲ ಎಂದು ಲೇವಡಿ ಮಾಡಿದ್ರು.
ಸಿ ವೋಟರ್ ಕಾಂಗ್ರೆಸ್ ಪಕ್ಷದ ಸಮೀಕ್ಷೆ : ಯಾವುದೇ ಕಾರಣಕ್ಕೂ ಈ ಸಮೀಕ್ಷೆ ನಿಜ ಆಗುವುದಿಲ್ಲ. ಜನರು ಮತ ಕೊಡೋದು ಮುಖ್ಯ. ಕಾಂಗ್ರೆಸ್, ಬಿಜೆಪಿ ನಾಯಕರು ಯಾವ ಆಧಾರದಲ್ಲಿ 150 ಸ್ಥಾನ ಅಂತಾರೆ ಹೇಳಲಿ. ನೀವು ನನ್ನನ್ನು ಕೇಳಬಹುದು 123 ಹೇಗೆ ಬರುತ್ತೆ ಅಂತ. ನಾನು 106 ಕ್ಷೇತ್ರದಲ್ಲಿ ಜನರನ್ನು ಭೇಟಿ ಮಾಡಿದ್ದೇನೆ. ನಿತ್ಯ ಒಂದೊಂದು ಕ್ಷೇತ್ರದಲ್ಲಿ 50-60 ಹಳ್ಳಿ ಸುತ್ತಿದ್ದೇನೆ. ಜನರ ಸಂಪರ್ಕದಲ್ಲಿ ಇದ್ದೇನೆ. ಪಂಚರತ್ನ, ಜನತಾ ಜಲಧಾರೆ ಯಶಸ್ವಿಯಾಗಿದೆ. ನನ್ನ ರೋಡ್ ಶೋಗೆ ಜನ ಸ್ಪಂದನೆ ಸಿಕ್ಕಿದೆ. ದೇವನಹಳ್ಳಿಯಲ್ಲಿ ಜನ ಇಲ್ಲ ಎಂದು ಅಮಿತ್ ಶಾ ರೋಡ್ ಶೋ ಕ್ಯಾನ್ಸಲ್ ಆಯ್ತು. ಆದರೆ ನಮಗೆ ಜನರೇ ಆಶೀರ್ವಾದ ಮಾಡುತ್ತಾರೆ. ನಾವು ಯಾರಿಗೂ ಹಣ ಕೊಟ್ಟು ಸರ್ವೆ ಮಾಡಿಸಿಲ್ಲ. ಅದರ ಅವಶ್ಯಕತೆ ನಮಗೆ ಇಲ್ಲ. ಜನರ ಬೆಂಬಲದ ಆಧಾರದಲ್ಲಿ ನಾವು ಬಹುಮತ ಬರುತ್ತದೆ ಎಂದು ಹೇಳುತ್ತಿದ್ದೇವೆ. ಕೆಲವು ಖಾಸಗಿ ವಾಹಿನಿಗಳು 22-23 ಅಂತ ತೋರಿಸುತ್ತಿದ್ದಾರೆ. ಪಾಪ 1 ಅಂಕಿ ಮುಂದೆ ಹಾಕೋದು ಮರೆತು ಹೋಗಿದ್ದಾರೆ. ಜೆಡಿಎಸ್ ಗೆ 123 ಸ್ಥಾನ ಈ ಬಾರಿ ಬರಲಿದೆ ಎಂದು ಹೆಚ್ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ರೀತಿ ಜೆಡಿಎಸ್ ಗೆ ಮಮತಾ ಬ್ಯಾನರ್ಜಿ, ಕೆಸಿಆರ್ ಪ್ರಚಾರ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ನನ್ನ ಕಾರ್ಯಕರ್ತರೇ ನನ್ನ ಪ್ರಚಾರಕರು. ನಮ್ಮ ಕಾರ್ಯಕರ್ತರ ಶಕ್ತಿ ಮುಂದೆ ಯಾವ ಇಂಟರ್ ನ್ಯಾಷನಲ್ ನಾಯಕರ ಅವಶ್ಯಕತೆ ಇಲ್ಲ. ಗಡಿ ಭಾಗದ ಕೆಲವು ಕ್ಷೇತ್ರದಲ್ಲಿ ತೆಲಂಗಾಣ ಶಾಸಕರು ನಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಾರೆ. ರಾಷ್ಟ್ರೀಯ ನಾಯಕರನ್ನು ಕರೆಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡೋ ಬದಲು ಅದೇ ದುಡ್ಡನ್ನು ನಾಲ್ಕು ಜನ ಅಭ್ಯರ್ಥಿಗಳಿಗೆ ಕೊಡಬಹುದು ಎಂದು ಹೇಳಿದ್ರು.
ಕಾಂಗ್ರೆಸ್-ಬಿಜೆಪಿಯಿಂದ ಇನ್ನೂ ಬರುವವರು ಇದ್ದಾರೆ : ಇನ್ನೊಂದು ವಾರದಲ್ಲಿ ಅನೇಕ ಜನ ಜೆಡಿಎಸ್ ಗೆ ಸೇರ್ಪಡೆ ಆಗುತ್ತಾರೆ. ನಾಳೆ ತುಮಕೂರಿನಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಇದ್ದು, ಕಾಂಗ್ರೆಸ್ನ ಹಲವಾರು ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ. ತುಮಕೂರಿನ 11 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುತ್ತೆ ಎಂಬ ನಂಬಿಕೆ ಇದೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಬಂಡಾಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೆಚ್.ಡಿಕೆ, ಟಿಕೆಟ್ ವಿಚಾರದಲ್ಲಿ ನೀವೇ ನಿರ್ಧಾರ ಮಾಡಿ ಎಂದು ಹಾಲಿ ಶಾಸಕರಿಗೆ ಹೇಳಿದ್ಎವು. ಅವರು ನಾನೇ ನಿಲ್ಲುತ್ತೇನೆ. ಇಲ್ಲದಿದ್ದರೆ ನಮ್ಮ ಅಳಿಯನಿಗೆ ಟಿಕೆಟ್ ಕೊಡಿ ಎಂದರು. ಅಲ್ಲಿ ದೊಡ್ಡ ಮಟ್ಟದ ಬಂಡಾಯ ಇಲ್ಲ. ಕಾರ್ಯಕರ್ತರು ಜೆಡಿಎಸ್ ಪರ ಇದ್ದಾರೆ. ಇದರಿಂದ ಯಾವುದೇ ಸಮಸ್ಯೆ ಆಗಲ್ಲ ಎಂದು ಹೇಳಿದರು.
ಅಲ್ಕೋಡ್ ಹನುಮಂತಪ್ಪ ಜೆಡಿಎಸ್ಗೆ : ನಮ್ಮ ಪಕ್ಷದ ಹಿರಿಯ ಮುಖಂಡರು ಮತ್ತೆ ತಮ್ಮ ಸ್ವಂತ ಮನೆಗೆ ಅಲ್ಕೋಡ್ ಹನುಮಂತಪ್ಪ ಬರುತ್ತಿದ್ದಾರೆ. ಸಿಎಂ ಇಬ್ರಾಹಿಂ ಅವರ ನೇತೃತ್ವದಲ್ಲಿ ಜೆಡಿಎಸ್ ಮನೆಗೆ ಬರಲು ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಅವರ ಶಕ್ತಿ ಬಳಸಿಕೊಳ್ಳುವ ಕೆಲಸ ಮಾಡಲಿಲ್ಲ. ಅವರ ದೇಹ ಕಾಂಗ್ರೆಸ್ನಲ್ಲಿ ಇತ್ತು, ಮನಸ್ಸು ಜೆಡಿಎಸ್ ನಲ್ಲಿ ಇತ್ತು. ನಮ್ಮ ಸಂಪರ್ಕದಲ್ಲೇ ಅಲ್ಕೊಡ್ ಹನುಮಂತಪ್ಪ ಇದ್ದರು. ಕಾಂಗ್ರೆಸ್ ನಡವಳಿಕೆಯಿಂದ ಬೇಸತ್ತು ಜೆಡಿಎಸ್ಗೆ ಬಂದಿದ್ದಾರೆ. ಜೆಡಿಎಸ್ ನಲ್ಲಿ ರಾಜ್ಯ ಮಟ್ಟದಲ್ಲಿ ಸ್ಥಾನಮಾನ ಕೊಡಲು ಸಿಎಂ ಇಬ್ರಾಹಿಂ ನಿರ್ಧಾರ ಮಾಡಿದ್ದಾರೆ. ಅವರ ಜೊತೆ ಉತ್ತರ ಕರ್ನಾಟಕ ಭಾಗದ ಹಲವಾರು ಜನ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಹನುಮಂತಪ್ಪ ಅನುಭವ ಜೆಡಿಎಸ್ ಗೆ ಉಪಯೋಗ ಆಗುತ್ತದೆ ಎಂದು ಹೇಳಿದ್ರು.
ಕಾರ್ಯಾಧ್ಯಕ್ಷರಾಗಿ ಅಲ್ಕೋಡ್ ಹನುಮಂತಪ್ಪ ನೇಮಕ : ಜನತಾದಳದ ಕಾರ್ಯಾಧ್ಯಕ್ಷರಾಗಿ ಅಲ್ಕೊಡ್ ಹನುಮಂತಪ್ಪ ಅವರನ್ನು ಇದೇ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಘೋಷಣೆ ಮಾಡಿದರು. ನಂತರ ಮಾತನಾಡಿ, ಹನುಮಂತಪ್ಪ ಜೆಡಿಎಸ್ ಸೇರ್ಪಡೆ ಆಗಿದ್ದು, ಅವರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಿದ್ದೇವೆ. ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ. ಈ ಬಾರಿ ಸ್ವತಂತ್ರವಾಗಿ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ಇದನ್ನೂ ಓದಿ : ಖಾಸಗಿ ಕಾರಿಗೆ ಗೂಟ ಹಾಕಿ ಕೊಡುತ್ತಾರೋ?: ಅಭ್ಯರ್ಥಿ ನಾಮಪತ್ರ ವಾಪಸ್ ಆಡಿಯೋ ವೈರಲ್ ಬಗ್ಗೆ ಹೆಚ್ಡಿಕೆ ವ್ಯಂಗ್ಯ