ಬೆಂಗಳೂರು : ನಾನು ದೇಶ ಲೂಟಿ ಮಾಡುವ ಕೆಲಸ ಏನೂ ಮಾಡಿಲ್ಲ. ದೊಡ್ಡ ಅಪರಾಧ ಕೆಲಸ ಮಾಡಿಲ್ಲ. ಅಚಾತುರ್ಯ ಯಾರಿಂದ ಆದರೂ ಅದರ ಹೊಣೆ ನಾನೇ ಹೊರುತ್ತೇನೆ. ನನ್ನ ಮನೆಯಲ್ಲಿ ಆಗಿರುವುದರಿಂದ ನಾನೇ ಜವಾಬ್ದಾರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಜೆಪಿ ನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಿದ್ಯುತ್ ಕಳ್ಳತನ ಮಾಡುವ ದರಿದ್ರ ನನಗೆ ಬಂದಿಲ್ಲ. 2-3 ಸಾವಿರ ದರದ ವಿದ್ಯುತ್ ಕದಿಯಬೇಕಾ ನಾನು?. ಮನೆ ಹತ್ತಿರ ಬರುವವರಿಗೆ ನಾನು ಹಣ ನೀಡುತ್ತೇನೆ ಎಂದರು.
ದೇಶ ಮತ್ತು ರಾಜ್ಯ ಮುಳುಗಿ ಹೋಗುವಂತಹ ಕೆಲಸ ನಾನೇನು ಮಾಡಿಲ್ಲ. ಸರ್ಕಾರ ನೀತಿ ನಿಯಮಗಳ ಪ್ರಕಾರ ಏನು ದಂಡ ಕಟ್ಟಬೇಕೋ ಅದಕ್ಕೆ ನಾನು ಸಿದ್ಧ ಇದ್ದೇನೆ. ನೊಟೀಸ್ ಕೊಡಿ ಅಂತ ನಾನೇ ಕೇಳಿದ್ದೇನೆ. ನಾನೇ ಮುಗಿಸಿದ್ದೇನೆ ಎಂದು ಹೇಳಿದರು. ಕುಮಾರಸ್ವಾಮಿ ವಿದ್ಯುತ್ ಕಳ್ಳತನ ಮಾಡಿದ್ದಾರೆ ಅಂತ ಕಾಂಗ್ರೆಸ್ ಟ್ವೀಟ್ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಂತ ದರಿದ್ರ ನನಗೆ ಬಂದಿಲ್ಲ. ಅಂತ ದರಿದ್ರ ಬಂದಿರೋದು ಕಾಂಗ್ರೆಸ್ ನಾಯಕರಿಗೆ. ನಾನು ಹರಿಶ್ಚಂದ್ರ ಅಂತ ಹೇಳ್ತಿಲ್ಲ. ಕಾಂಗ್ರೆಸ್ ನಾಯಕರು ಮಾಡ್ತಿರೋ ದಂಧೆಗೆ ನಾನು ಯಾವತ್ತೂ ಅವಕಾಶ ಕೊಟ್ಟಿಲ್ಲ ಎಂದು ತಿರುಗೇಟು ನೀಡಿದರು.
ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡೋಣ ಎಂದು ಡಿಕೆಶಿ ಆಹ್ವಾನ ವಿಚಾರಕ್ಕೆ, ಬನ್ನಿ ಬ್ರದರ್ ಬೆಳಗಾವಿಯಲ್ಲೇ ಮಾತನಾಡೋಣ. ಇದೆಲ್ಲವನ್ನ ಅರಗಿಸಿಕೊಳ್ಳುವ ನೈತಿಕತೆ ಉಳಿಸಿಕೊಂಡಿದ್ದೇನೆ. ನನ್ನಲ್ಲಿ ಮುಚ್ಚು ಮರೆ ಇಲ್ಲ, ಎಲ್ಲವೂ ತೆರೆದ ಪುಸ್ತಕ. ಹಲವಾರು ಭಾರಿ ವಿಧಾನಸಭೆಯಲ್ಲೇ ಹೇಳಿದ್ದಾರೆ. ಕಾಂಗ್ರೆಸ್‌ನವರ ದಬ್ಬಾಳಿಕೆ ಮತ್ತು ಆರೋಪಗಳನ್ನ ಅರಗಿಸಿಕೊಳ್ಳುವ ನೈತಿಕತೆ ಉಳಿಸಿಕೊಂಡಿದ್ದೇನೆ ಎಂದರು.
ಇವರು ಲೂಟಿ ಹೊಡೆಯುವ ಮಟ್ಟಕ್ಕೆ ನಾನು ಕೈ ಹಾಕಿಲ್ಲ. ಬಿಜಾಪುರದಲ್ಲಿ ಕೋ ಆಪರೇಟಿವ್ ಸೊಸೈಟಿಗೆ ಜಯನಗರ ಅಡ್ರಸ್ ಕೊಟ್ಟು ಆ ಲೈಸೆನ್ಸ್ ತೆಗೆದುಕೊಂಡ್ರು. ಇಲ್ಲಿ ನಕಲಿ ಹೌಸಿಂಗ್ ಸೊಸೈಟಿ ಸೃಷ್ಟಿ ಮಾಡಿ ಲೂಟಿ ಮಾಡಿದ್ದು ನಾನಾ?. ನೋಡಿ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಯಾವುದೇ ಅಸೂಯೆ ಇಲ್ಲ. 10 ವರ್ಷ ನೀವೇ ಗೂಟ ಹೊಡೆದುಕೊಂಡು ಇರಿ. ನನ್ನದೇನೂ ಆಕ್ಷೇಪ ಇಲ್ಲ. ಲೂಟಿ ಹೊಡೆಯುವುದು ಮತ್ತು ಜನರ ಮುಖದ ಮೇಲೆ ಟೋಪಿ ಹಾಕುವುದನ್ನು ಬಿಡಿ ಎಂದು ಟೀಕಾ ಪ್ರಹಾರ ನಡೆಸಿದರು.
ಜೆಡಿಎಸ್ನ ಮಾಜಿ ಶಾಸಕರಾದ ಗೌರಿಶಂಕರ್ ಮತ್ತು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಇದು ನನಗೆ ಹಳಸಲು ಸುದ್ದಿ. ಚುನಾವಣೆ ನಡೆದ ಒಂದು ತಿಂಗಳಿಂದಲೇ ಕಾಂಗ್ರೆಸ್ ಸೇರ್ಪಡೆ ಕೆಲಸ ಆರಂಭವಾಗಿದೆ. ಮಂಜುನಾಥ್ ಮತ್ತು ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಹಳೆಯದು. ನಾನೇ ಎರಡು ಮೂರು ಬಾರಿ ಕರೆದು ಮಾತನಾಡಿದ್ದೇನೆ. ನಿಮಗೆ ಎಲ್ಲಿ ರಾಜಕೀಯ ಭವಿಷ್ಯ ಇರುತ್ತದೋ ಅಲ್ಲಿ ಇರಿ ಅಂತ ಹೇಳಿದ್ದೇನೆ. ನನಗೆ ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ ಎಂದರು.
ಬೆಸ್ಕಾಂ ಜಾಗೃತ ದಳ ಭೇಟಿ: ಇದಕ್ಕೂ ಮುನ್ನ ಮಾಜಿ ಸಿಎಂ ಕುಮಾರಸ್ವಾಮಿ ಅವರ ನಿವಾಸಕ್ಕೆ ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಭೇಟಿ ನೀಡಿ ಅಕ್ರಮ ವಿದ್ಯುತ್ ಸಂಪರ್ಕದ ಬಗ್ಗೆ ಪರಿಶೀಲನೆ ನಡೆಸಿ ತೆರಳಿದ್ದಾರೆ. ನಾಳೆ ದಂಡ ಕಟ್ಟುವ ಬಗ್ಗೆ ಬೆಸ್ಕಾಂ ಅಧಿಕಾರಿಗಳು ತಿಳಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ವಿದ್ಯುತ್ ಕಳ್ಳತನದ ಬಗ್ಗೆ ಕುಮಾರಸ್ವಾಮಿ ಒಪ್ಪಿಕೊಂಡಿದ್ದಕ್ಕೆ ಅಭಿನಂದನೆ : ಡಿಸಿಎಂ ಡಿ ಕೆ ಶಿವಕುಮಾರ್