ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ಗಳಿಗೆ ಸಂಕಷ್ಟ ಉಂಟಾಗಿದೆ. ಕಾನೂನಿನ ಪ್ರಕಾರ ಜನಪ್ರತಿನಿಧಿಗಳು ಲೋಕಾಯುಕ್ತಕ್ಕೆ ಆಸ್ತಿವಿವರ ಸಲ್ಲಿಸದೆ ಲೋಪ ಎಸಗಿದ್ದಾರೆ.
ಮತದಾರನಿಂದ ಮತ ಪಡೆದು ಗೆದ್ದ ಜನಪ್ರತಿನಿಧಿ ಕಡ್ಡಾಯ ಆಸ್ತಿ ವಿವರ ಸಲ್ಲಿಸಬೇಕು. ಜೂನ್ 30ರೊಳಗೆ ಲೋಕಾಯುಕ್ತದ ಕಾಯ್ದೆ ಪ್ರಕಾರ ಆಸ್ತಿ ವಿವರ ಸಲ್ಲಿಸಬೇಕು ಎಂಬ ನಿಯಮವಿದ್ದರೂ 160 ಮಾಜಿ ಕಾರ್ಪೊರೇಟರ್ಗಳ ಆಸ್ತಿ ವಿವರ ಸಲ್ಲಿಸಿಲ್ಲ ಎಂದು ಸಾಮಾಜಿಕ ಹೋರಾಟಗಾರ ಹೆಚ್.ಎಂ. ವೆಂಕಟೇಶ್ ದಾಖಲೆ ಬಿಡುಗಡೆ ಮಾಡಿದರು.
ಮೇಯರ್ ಆಗಿ ಕೆಲಸ ನಿರ್ವಹಣೆ ಮಾಡಿದ್ದ ಮಂಜುನಾಥ್ ರೆಡ್ಡಿ, ಗೌತಮ್ ಕುಮಾರ್, ಸಂಪತ್ ರಾಜ್, ಪದ್ಮಾವತಿ ಕೂಡ ಆಸ್ತಿ ವಿವರ ಸಲ್ಲಿಸಿಲ್ಲ. ಆಸ್ತಿ ವಿವರ ಸಲ್ಲಿಸದ ಕಾರ್ಪೊರೇಟರ್ಸ್‌ಗೆ ನೋಟಿಸ್ ನೀಡಬಹುದು. ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟಿಸಬಹುದು. ಅಲ್ಲದೆ ರಾಜ್ಯಪಾಲರಿಗೆ ಪತ್ರ ಬರೆಯಬೇಕು. ಐಪಿಸಿ ಸೆಕ್ಷನ್ 176 ರ ಪ್ರಕಾರ ಕ್ರಿಮಿನಲ್ ಕೇಸ್ ದಾಖಲು ಮಾಡುವ ಅಧಿಕಾರವಿದೆ. ಆದರೆ, ಈವರೆಗೂ ಲೋಕಾಯುಕ್ತದಿಂದಲೂ ದೂರು ದಾಖಲು ಮಾಡಿಲ್ಲ ಎಂದರು.
ಕೆಎಂಸಿ ಕಾಯ್ದೆ ಪ್ರಕಾರ ಮೇಯರ್ ಅವರಿಗೆ ಆಸ್ತಿ ವಿವರ ಸಲ್ಲಿಸುತ್ತಿದ್ದ ಕಾರ್ಪೊರೇಟರ್‌ಗಳು, 2019ರಲ್ಲಿ ಲೋಕಾಯುಕ್ತಕ್ಕೂ ಆಸ್ತಿ ವಿವರ ಸಲ್ಲಿಸಬೇಕು ಎಂದು ಆದೇಶ ಹೊರಡಿಸಿತ್ತು. ಹೀಗಿದ್ದರೂ ಕಾರ್ಪೊರೇಟರ್‌ಗಳು ಆಸ್ತಿವಿವರ ಸಲ್ಲಿಸಿಯೇ ಇಲ್ಲ. ನವೆಂಬರ್ 5 ರವರೆಗೂ 124 ಪಾಲಿಕೆ ಸದಸ್ಯರು ಆಸ್ತಿ ವಿವರ ಸಲ್ಲಿಸಿಯೇ ಇಲ್ಲ ಎಂದು ದೂರಿದರು.