ಬೆಂಗಳೂರು: ದೇವಸ್ಥಾನಗಳ ಆಸ್ತಿಪಾಸ್ತಿ ಸಂರಕ್ಷಣೆ ಹಾಗೂ ಪತ್ತೆಗಾಗಿ ಸಮೀಕ್ಷೆ ನಡೆಸುವುದಕ್ಕೆ ತಂಡ ರಚಿಸಲು ನಿರ್ಧರಿಸಲಾಗಿದೆ ಎಂದು ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ವಿಕಾಸಸೌಧದಲ್ಲಿ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ರಾಜ್ಯದ ದೇವಸ್ಥಾನಗಳ ಆಸ್ತಿಪಾಸ್ತಿ ಸಮೀಕ್ಷೆಗೆ ತಂಡ ರಚನೆ ಮಾಡಲು ನಿರ್ಧರಿಸಿದ್ದೇವೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸರ್ವೇ ತಂಡ ರಚನೆ ಮಾಡಲಾಗುವುದು. ಈ ಸರ್ವೇ ತಂಡ ಎಲ್ಲ ದೇವಾಸ್ಥಾನಗಳ ಸಮೀಕ್ಷೆ ನಡೆಸಲಿದೆ.
ದೇವಸ್ಥಾನಗಳ ಆಸ್ತಿಯನ್ನು ಯಾರಾದರೂ ಅತಿಕ್ರಮಣ, ಒತ್ತುವರಿ ಮಾಡಿದ್ದರೆ ಈ ಸಮೀಕ್ಷೆಯಿಂದ ಗೊತ್ತಾಗಲಿದೆ. ಈ ಸಂಬಂಧ ಹಲವರಿಂದ ದೂರುಗಳು ಬರುತ್ತಿದ್ದವು. ಹೀಗಾಗಿ ದೇವಸ್ಥಾನಗಳ ಆಸ್ತಿಗಳ ಪತ್ತೆಗಾಗಿ ಸಮೀಕ್ಷೆ ನಡೆಸಲಿದ್ದೇವೆ ಎಂದರು. ಅಲ್ಲದೆ ಇಲಾಖೆ ವ್ಯಾಪ್ತಿಯಲ್ಲಿನ ಅನುವಂಶಿಕ ದೇವಸ್ಥಾನಗಳಿಗೆ ಕಾರ್ಯನಿರ್ವಾಹಕ ಅಧಿಕಾರಿ ನೇಮಕ ಮಾಡಲಾಗುತ್ತದೆ. ಆದರೆ, ಕಾರ್ಯನಿರ್ವಾಹಕ ಅಧಿಕಾರಿಗಳು ಅನುವಂಶಿಕ ಆಡಳಿತ ಮುಖ್ಯಸ್ಥರ ಮೇಲುಸ್ತುವಾರಿಗಳಾಗಿ ಕಾರ್ಯನಿರ್ಹಿಸಲ್ಲ ಎಂದು ಸ್ಪಷ್ಟಪಡಿಸಿದರು.
ಧಾರ್ಮಿಕ ಪರಿಷತ್ ರಚನೆ:
ಒಂದು ತಿಂಗಳಲ್ಲಿ 30 ಜಿಲ್ಲೆಗಳಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ರಚನೆ ಮಾಡಲಾಗುತ್ತದೆ. ಡಿಸಿ ಧಾರ್ಮಿಕ ಪರಿಷತ್ನ ನೇತೃತ್ವ ವಹಿಸಲಿದ್ದಾರೆ. ಇನ್ನು ಬಿ ಮತ್ತು ಸಿ ದರ್ಜೆಯ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ ಮಾಡಲಾಗುವುದು. 62 ಎ ವರ್ಗದ ದೇವಾಲಯಗಳಿಗೆ ವ್ಯವಸ್ಥಾನಾ ಸಮಿತಿ ರಚನೆಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದರು.
ಎಂಜಿನಿಯರಿಂಗ್ ವಿಭಾಗ ರಚನೆ:
ದೇವಸ್ಥಾನಗಳ ಕುಸುರಿ ಕೆಲಸ, ಕಲಾತ್ಮಕ ಮೆರಗು ಕೊಡುವ ಕೆಲಸಗಳಿಗೆ ಲೋಕೋಪಯೋಗಿ ಇಲಾಖೆಗೆ ಪರಿಣತಿ ಇರಲ್ಲ. ಹೀಗಾಗಿ ನಮ್ಮದೇ ಎಂಜಿನಿಯರಿಂಗ್ ವಿಭಾಗ ರಚನೆಗೆ ಚಿಂತನೆ ನಡೆದಿದೆ. ಬಹಳ ದಿನಗಳಿಂದ ಈ ಬೇಡಿಕೆ ಇತ್ತು. ಸಾವಿರ ಸಿಬ್ಬಂದಿ ನೇಮಕ್ಕಕ್ಕೆ ನಿರ್ಧರಿಸಲಾಗಿದ್ದು, 15 ದಿನಗಳಲ್ಲಿ ಪ್ರಸ್ತಾಪ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಶೀಘ್ರ ಕೇಂದ್ರದ ಅನುದಾನ ಬಿಡುಗಡೆ:
ಕೇಂದ್ರದ ಅಧ್ಯಯನ ತಂಡ ನೆರೆ ಹಾನಿ ಬಗ್ಗೆ ಸಮೀಕ್ಷೆ ಮಾಡಿದ್ದು, ರಾಜ್ಯಕ್ಕೆ ಗರಿಷ್ಠಮಟ್ಟದ ಪರಿಹಾರ ಹಣ ಬಿಡುಗಡೆ ಆಗಲಿದೆ ಎಂಬ ವಿಶ್ವಾಸ ಇದೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುವಾಗ ಜಾಸ್ತಿನೇ ಹಣ ಬಿಡುಗಡೆ ಮಾಡುತ್ತದೆ. ಮೂರ್ನಾಲ್ಕು ದಿನಗಳಲ್ಲೇ ಹಣ ಕೊಡಬೇಕು ಎಂಬ ಮಿತಿ ಏನೂ ಇಲ್ಲ. ಅವರು ಶೀಘ್ರದಲ್ಲಿ ಹಣ ಬಿಡುಗಡೆ ಮಾಡುತ್ತಾರೆ. ನಮ್ಮಲ್ಲಿ ಯಾವುದೇ ಹಣದ ಕೊರತೆ ಇಲ್ಲ. ಯಾರಿಗೂ ಗೊಂದಲ ಇಲ್ಲ. ಕೇಂದ್ರ ಸರ್ಕಾರ ನಮ್ಮ ಪರವಾಗಿದೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಡಿ.ಕೆ.ಶಿವಕುಮಾರ್ ವಿಚಾರ ಕುರಿತು ಮಾತನಾಡಿದ ಅವರು, ಡಿಕೆಶಿ ಮೇಲಿನ ಕ್ರಮಕ್ಕೂ, ಇಡಿಗೂ ನಮ್ಮ ಸರ್ಕಾರಕ್ಕೂ ಸಂಬಂಧ ಇಲ್ಲ. ನಿನ್ನೆ ಕೈಗೊಳ್ಳಲಾದ ಒಕ್ಕಲಿಗರ ಹೋರಾಟದಲ್ಲಿ ಬಿಜೆಪಿ ನಾಯಕರು ಯಾರೂ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.