ಬೆಂಗಳೂರು: ರಾಜ್ಯದಲ್ಲಿ ಸ್ವಯಂ ರಕ್ಷಣೆ ಯೋಧರ ಪಡೆಯನ್ನು (ಸೆಲ್ಫ್ ಡಿಫೆನ್ಸ್ ಆರ್ಮಿ) ರಚನೆ ಮಾಡಬೇಕಾದ ಅಗತ್ಯವಿದ್ದು, ಈ ಸಂಬಂಧ ರಾಜ್ಯ ಮಟ್ಟದಲ್ಲಿ ಗೃಹ ಇಲಾಖೆಯಿಂದ ಹೊಸ ಯೋಜನೆ ಜಾರಿಗೊಳಿಸಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರಾಜಧಾನಿಯಲ್ಲಿ ಕರ್ನಾಟಕ ರಾಜ್ಯ ಮೀಸಲು ಪಡೆ (ಕೆಎಸ್ಆರ್ಪಿ) ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ ಶಸ್ತ್ರರಹಿತ ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗಾಗಿ ಸ್ವಯಂ ರಕ್ಷಣಾ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಇಂದಿನ ಆಧುನಿಕ ಕಾಲದಲ್ಲಿ ಮಹಿಳೆಯರ ಸುರಕ್ಷತೆ ದೊಡ್ಡ ಸವಾಲಾಗಿದೆ. ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳುವಷ್ಟು ಶಕ್ತಿವಂತರಾಗಬೇಕಾಗಿದೆ. ಇದಕ್ಕೆ ಸ್ವಯಂ ರಕ್ಷಣಾ ತರಬೇತಿ ಅಗತ್ಯವಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗಾಗಿ ಈ ರೀತಿಯ ತರಬೇತಿ ನೀಡಲು ಮೀಸಲು ಪಡೆ ಯೋಜನೆ ಹಾಕಿಕೊಂಡಿರುವುದು ಸ್ವಾಗತಾರ್ಹ ಎಂದರು.
![Formation of Self Defense Army in the State](https://etvbharatimages.akamaized.net/etvbharat/prod-images/kn-bng-07-basavaraj-bommai-ksrp-international-womens-day-celebration-school-college-students-self-defence-ka10032_09032021181051_0903f_1615293651_471.jpg)
ಇದನ್ನೂ ಓದಿ: ನನ್ನ ಹೆಸರಲ್ಲೇ ರಾಮ ಇದ್ದಾನೆ, ನಮ್ಮೂರಿನ ರಾಮಮಂದಿರಕ್ಕೆ ಹಣ ಕೊಟ್ಟಿದ್ದೇನೆ: ಸಿದ್ದರಾಮಯ್ಯ
ಇದಕ್ಕಾಗಿ ನಾನು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತು ಕೆ.ಎಸ್.ಆರ್.ಪಿ ಮುಖ್ಯಸ್ಥ ಅಲೋಕ್ ಕುಮಾರ್ಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಬೊಮ್ಮಾಯಿ ಹೇಳಿದರು. ಈ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದಲ್ಲಿ ಯೋಜನೆಯೊಂದನ್ನು ಜಾರಿಗೆ ತರುವ ಉದ್ದೇಶವಿದೆ. ಈ ಯೋಜನೆ ಕುರಿತು ಪೊಲೀಸ್ ಮಹಾನಿರ್ದೇಶಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ಮಾಡಲಾಗಿದೆ. ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳಿಸಲಾಗಿದೆ. ರಾಜ್ಯದಲ್ಲಿ ಏಪ್ರಿಲ್ 15, 2021 ರಂದು ಸೆಲ್ಫ್ ಡಿಫೆನ್ಸ್ ಆರ್ಮಿ ಸಿದ್ದಪಡಿಸುವ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಪ್ರಕಟಿಸಿದರು.
ಮಹಿಳಾ ಪೇದೆಗಳಿಗೆ ವಿಶೇಷ ತರಬೇತಿ ಶಾಲೆ ಸ್ಥಾಪನೆ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ರಾಜ್ಯದಲ್ಲಿ ಮಹಿಳಾ ಪೊಲೀಸ್ ಪೇದೆಗಳಿಗಾಗಿ ವಿಶೇಷ ತರಬೇತಿಯ ಅಗತ್ಯವಿದೆ. ಹೀಗಾಗಿ ಅವರಿಗಾಗಿ ವಿಶೇಷವಾದ ತರಬೇತಿ ಶಾಲೆಯನ್ನು ಆರಂಭಿಸಲಾಗುವುದು. ಇದರಿಂದ ಮಹಿಳಾ ಪೊಲೀಸ್ ಪೇದೆಗಳ ಕಾರ್ಯಕ್ಷಮತೆ ಹೆಚ್ಚಲಿದೆ. ಕಾನೂನು ಸುವ್ಯವಸ್ಥೆ ರಕ್ಷಣೆಗೆ ಮತ್ತಷ್ಟುಬಲ ಬಂದಂತಾಗುತ್ತದೆ ಎಂದು ಬೊಮ್ಮಾಯಿ ಹೇಳಿದರು.
ಕೆಎಸ್ಆರ್ಪಿ ಸದಾ ಕಾಲ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಗಲಭೆಗಳನ್ನು ಯಶಸ್ವಿಯಾಗಿ ನಿಗ್ರಹಿಸುವಲ್ಲಿ ಹಾಗೂ ಕಾನೂನು ಭಂಗ ಮಾಡುವವರಿಗೆ ತಕ್ಕ ಪಾಠ ಕಲಿಸುವಲ್ಲಿ ಕೆಎಸ್ಆರ್ಪಿ ಪಾತ್ರ ಬಹು ಮುಖ್ಯವಾಗಿದೆ. ಹೀಗಾಗಿಯೇ ಇದು ನಮ್ಮ ಹೆಮ್ಮೆಯ ಪಡೆ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.