ಬೆಂಗಳೂರು : ರಾಜ್ಯದಲ್ಲಿ ಶಿಕ್ಷಣ ನೀತಿ ರೂಪಿಸುವ ಕುರಿತಂತೆ ಒಂದು ವಾರದಲ್ಲಿ ತಜ್ಞರ ಸಮಿತಿ ರಚಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ ಸುಧಾಕರ್ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಇಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ 'ತಾಂತ್ರಿಕ ಶಿಕ್ಷಣದಲ್ಲಿ ಉದ್ಯೋಗಾವಕಾಶ ವರ್ಧನೆ ಕಾರ್ಯಾಗಾರ' ದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮಿತಿಗೆ ಯಾರು ಅಧ್ಯಕ್ಷರು, ಸದಸ್ಯರು ಇರಬೇಕೆಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧಾರ ಮಾಡಲಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಗುಣಮಟ್ಟದ ಶಿಕ್ಷಣ ನೀಡಲು ಅನುಕೂಲವಾಗುವಂತೆ ಅಧ್ಯಯನ ಮಾಡಿ ವರದಿ ನೀಡಲು ಸಮಿತಿ ರಚಿಸಲಾಗುವುದು. ಸಮಿತಿಗೆ ಸದಸ್ಯರ ನೇಮಕ ಮಾಡುವ ಮುನ್ನ ಅವರ ಪೂರ್ವಾಪರವನ್ನು ಪರಿಶೀಲಿಸಲಾಗುತ್ತದೆ. ಸಮಿತಿಗೆ ಅಧ್ಯಕ್ಷರು ಆಗುವವರು ಹೊರರಾಜ್ಯ ಅಥವಾ ಹೊರದೇಶ ಎನ್ನುವುದಕ್ಕಿಂತ ಮುಖ್ಯವಾಗಿ ಎಲ್ಲ ವಿಚಾರಗಳನ್ನು ಬಲ್ಲವರಾಗಿರಬೇಕು. ಸಮಿತಿಗೆ ನಿರ್ದಿಷ್ಟ ಮಾನದಂಡಗಳನ್ನು ನೀಡಿ ಎಲ್ಲರ ಅಭಿಪ್ರಾಯ ಹಾಗೂ ಭಾವನೆಗಳನ್ನು ಸಂಗ್ರಹಿಸಿ, ವರದಿ ನೀಡುವಂತೆ ಸೂಚಿಸಲಾಗುವುದು ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸಿ ಹೊಸ ಶಿಕ್ಷಣ ನೀತಿ ಜಾರಿಗೆ ತರುವ ಪ್ರಕ್ರಿಯೆ ಪ್ರಾರಂಭವಾಗಿದೆ. ಈಗಾಗಲೇ ಎನ್‍ಇಪಿಯಡಿ ವ್ಯಾಸಂಗ ಪ್ರಾರಂಭಿಸಿರುವವರು ಅದೇ ಹಳೆಯ ಪದ್ಧತಿಯಲ್ಲೇ ಮುಂದುವರೆಯುತ್ತಾರೆ. ಹೊಸದಾಗಿ ವ್ಯಾಸಂಗ ಆರಂಭಿಸುವವರಿಗೆ ಹೊಸ ಶಿಕ್ಷಣ ನೀತಿಯಡಿ ಶಿಕ್ಷಣ ದೊರೆಯಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಸರ್ಕಾರಿ ಕಾಲೇಜಿನ ಅಧ್ಯಾಪಕರು, ಖಾಸಗಿ ಕೋಚಿಂಗ್ ಸೆಂಟರ್ಗಳಲ್ಲಿ ಬೋಧನೆ ಮಾಡುವ ಬಗ್ಗೆ ಹೆಚ್ಚು ದೂರು ಬಂದಿಲ್ಲ. ಕಾಲೇಜಿನ ಅವಧಿಯಲ್ಲಿ ಕೋಚಿಂಗ್ ಸೆಂಟರ್ನಲ್ಲಿ ಬೋಧನೆ ಮಾಡುವ ಅಥವಾ ಅವರ ಹೆಸರಿನಲ್ಲಿ ಕೋಚಿಂಗ್ ಸೆಂಟರ್ ತೆರೆದಿರುವ ಬಗ್ಗೆ ದೂರುಗಳಿಲ್ಲ. ಸರ್ಕಾರಿ ಅಧ್ಯಾಪಕರಾದವರು ಖಾಸಗಿಯಾಗಿ ಕೋಚಿಂಗ್ ಸೆಂಟರ್ಗಳಲ್ಲಿ ಬೋಧನೆ ಮಾಡಲು ಅವಕಾಶವಿಲ್ಲ ಎಂದು ಹೇಳಿದರು.
ಸೀಟು ಹೆಚ್ಚಳಕ್ಕೆ ಕಡಿವಾಣ : ನಗರ ಕೇಂದ್ರಿತ ಎಂಜಿನಿಯರ್ ಕಾಲೇಜುಗಳಲ್ಲಿ ಮನಸೋಇಚ್ಛೆ ಸೀಟುಗಳನ್ನು ಹೆಚ್ಚಳ ಮಾಡುವುದಕ್ಕೆ ಕಡಿವಾಣ ಹಾಕಲಾಗುವುದು. ಇಲ್ಲದಿದ್ದರೆ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಶಿಕ್ಷಣ ದೊರೆಯುವುದಿಲ್ಲ. ಅದರಲ್ಲೂ ಬೆಂಗಳೂರು ಕೇಂದ್ರಿತ ಹಳೆಯ ಎಂಜಿನಿಯರ್ ಕಾಲೇಜುಗಳು ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಆದರೆ ಅದಕ್ಕೆ ತಕ್ಕಂತೆ ಪ್ರಯೋಗಾಲಯ, ಬೋಧಕ ಸಿಬ್ಬಂದಿ ನೇಮಕ ಇರುವುದಿಲ್ಲ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ ಆನ್‍ಲೈನ್ ಮೂಲಕ ಪರಿಶೀಲನೆ ನಡೆಸಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುವ ಷರತ್ತಿನೊಂದಿಗೆ ಅನುಮೋದನೆ ನೀಡುತ್ತದೆ. ಆ ನ್ಯೂನತೆಗಳಲ್ಲಿ ಲ್ಯಾಬ್, ಬೋಧಕ ಸಿಬ್ಬಂದಿ ಕೊರತೆಯೂ ಇರುತ್ತದೆ. ಈ ಬಗ್ಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ಗೆ ಪತ್ರ ಬರೆಯಲಾಗಿದೆ. ಯುಜಿಸಿಗೂ ಪತ್ರ ಬರೆಯಲಾಗುವುದು. ತಾಂತ್ರಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ತರಲು ಪರಿಶೀಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಎನ್ಇಪಿ ಬದಲಿಗೆ ಹೊಸ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ