ಬೆಂಗಳೂರು: ರಾಜ್ಯದಲ್ಲಿ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಬೆಲೆ ಕುಸಿದಾಗ ಅವುಗಳಿಗೆ ಬೆಂಬಲ ಬೆಲೆ ನಿಗದಿಪಡಿಸಲು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಐವರು ಸಚಿವರ ಕ್ಯಾಬಿನೆಟ್ ಉಪಸಮಿತಿ ರಚನೆ ಮಾಡಲಾಗಿದೆ.

ಟೊಮೆಟೊ, ಭತ್ತ, ರಾಗಿ, ಮೆಕ್ಕೆಜೋಳ, ತೆಂಗಿನಕಾಯಿ, ಈರುಳ್ಳಿ, ತೊಗರಿ ಸೇರಿದಂತೆ ಹಲವಾರು ಬೆಳೆಗಳ ಬೆಲೆ ಮಾರುಕಟ್ಟೆಯಲ್ಲಿ ಕುಸಿದಾಗ ಬೆಂಬಲ ಬೆಲೆಗೆ ಸರ್ಕಾರದಿಂದ ಮಾರುಕಟ್ಟೆ ಮಧ್ಯಪ್ರವೇಶ ಮಾಡಿ ಬೆಲೆ ನಿಗದಿಪಡಿಸಲು ಈ ಸಮಿತಿ ಸಹಾಯ ಮಾಡಲಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಸಚಿವ ಸಂಪುಟ ಉಪ ಸಮಿತಿಯ ಸದಸ್ಯರಾಗಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಉಪಮುಖ್ಯಮಂತ್ರಿ ಸವದಿ ಅಧ್ಯಕ್ಷತೆಯಲ್ಲಿ ಐವರು ಸಚಿವರ ಉಪಸಮಿತಿ ರಚಿಸಿ ಗುರುವಾರ ಆದೇಶ ಹೊರಡಿಸಲಾಗಿದೆ.