ಬೆಂಗಳೂರು: ಕನ್ನಡ ಚಲನಚಿತ್ರ ರಂಗದ ಖ್ಯಾತ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ 'ಅಂಬರೀಶ್ ಸ್ಮಾರಕ ಪ್ರತಿಷ್ಠಾನ ಸಮಿತಿ' ರಚಿಸಲಾಗಿದೆ.
ಕನ್ನಡದ ಮೇರು ನಟರಾದ ಡಾ. ರಾಜ್ಕುಮಾರ್ ಮತ್ತು ಡಾ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಪ್ರತಿಷ್ಠಾನದಂತೆ ಅಂಬರೀಶ್ ಅವರ ಸ್ಮಾರಕ ನಿರ್ಮಾಣ ಪ್ರತಿಷ್ಠಾನಕ್ಕೆ ಸಂಬಂಧಿಸಿದಂತೆ ಆಡಳಿತಾತ್ಮಕ ನಿರ್ಣಯ, ರೂಪು ರೇಷೆ, ಅನುಷ್ಠಾನ ಹಾಗೂ ಕಾರ್ಯಕ್ರಮಗಳ ನಿರ್ವಹಣೆಗಳ ಪರಿಶೀಲನೆಗಾಗಿ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಎಂಟು ಸದಸ್ಯರು ಒಳಗೊಂಡ ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಅಥವಾ ನಿರ್ದೇಶಕರು, ಅಂಬರೀಶ್ ಅವರ ಪತ್ನಿ ಸುಮಲತಾ, ಅಂಬರೀಶ್ ಅವರ ಪುತ್ರ ಅಭಿಷೇಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಅಥವಾ ಅವರ ಪ್ರತಿನಿಧಿ, ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರು ಅಥವಾ ಅವರ ಪ್ರತಿನಿಧಿ ಸದಸ್ಯರಾಗಿ ಇರಲಿದ್ದಾರೆ. ಈ ಸಮಿತಿಗೆ ಕಠೀರವ ಸ್ಟೂಡಿಯೋದ ವ್ಯವಸ್ಥಾಪಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.