ಬೆಂಗಳೂರು: ಅರಣ್ಯ ಭೂಮಿಯನ್ನು ಕಬಳಿಸಿ ಗಣಿಗಾರಿಕೆ ನಡೆಸಿ ಜೈಲಿಗೆ ಹೋಗಿ ಬಂದಿರುವ ಶಾಸಕ ಆನಂದ್‍ಸಿಂಗ್ ಅವರಿಗೆ ಅರಣ್ಯ ಇಲಾಖೆ ಖಾತೆ ನೀಡಿರುವ ಉದ್ದೇಶವಾದರೂ ಏನು ಎಂದು ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನಂದ್ ಸಿಂಗ್ ಅರಣ್ಯ ಭೂಮಿ ಕಬಳಿಸಿದ್ದಾರೆ. ಅರಣ್ಯ ಭೂಮಿ ಕಬಳಿಸಿ ಅಕ್ರಮ ಗಣಿಗಾರಿಕೆ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೆ. ಅವರ ವಿರುದ್ಧ 15 ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲಿವೆ. ಕೂಡಲೇ ಆನಂದ್ ಸಿಂಗ್ ಅವರಿಂದ ಅರಣ್ಯ ಇಲಾಖೆ ಖಾತೆಯನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಉಗ್ರ ಹೋರಾಟ ನಡೆಸಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಗಾಂಧಿ, ಅಂಬೇಡ್ಕರ್ ವಾದದಲ್ಲಿ ಬಿಜೆಪಿಯವರಿಗೆ ನಂಬಿಕೆ ಇಲ್ಲ. ಬಿಜೆಪಿ, ಆರ್ಎಸ್ಎಸ್ ನವರು ಮನು, ಗೋಡ್ಸೆ ವಾದದಲ್ಲಿ ನಂಬಿಕೆ ಇಟ್ಟವರು ಎಂದ ಅವರು ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪು ಸಂವಿಧಾನದ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ಆಘಾತ ತಂದಿದೆ ಎಂದು ಹೇಳಿದರು.
ಮೀಸಲಾತಿ ವಿಚಾರದಲ್ಲಿ ಬಿಜೆಪಿ ನಡೆ ವಿರೋಧಿಸಿ ನಾಳೆ ಬೆಳಗ್ಗೆ 11ಕ್ಕೆ ಸಿಎಂ ಗೃಹ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಮೌರ್ಯ ವೃತ್ತದಿಂದ ಪ್ರತಿಭಟನಾ ಜಾಥಾ ಆರಂಭವಾಗಲಿದ್ದು, ಸಿಎಂ ಗೃಹ ಕಚೇರಿವರೆಗೂ ಜಾಥಾದ ಮೂಲಕವೇ ತೆರಳಿ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.