ಬೆಂಗಳೂರು: ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಕರ್ನಾಟಕ ರಾಜ್ಯ ವಲಯ ಅರಣ್ಯಾಧಿಕಾರಿಗಳ ಸಂಘ ದೂರು ಸಲ್ಲಿಸಿದೆ. ವಿಧಾನಸೌಧದಲ್ಲಿ ಗುರುವಾರ ಸಂಜೆ ಸಚಿವರನ್ನು ಭೇಟಿ ಮಾಡಿದ ಅಧಿಕಾರಿಗಳು, ಶಾಸಕ ಪೂಂಜಾ ವಿರುದ್ಧ ದೂರು ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆ, ಉಪ್ಪಿನಂಗಡಿ ಅರಣ್ಯ ವಲಯದ ವ್ಯಾಪ್ತಿಯಲ್ಲಿನ ಬೆಳಂಗಡಿ ತಾಲೂಕಿನ ಕಳಂಜ ಗ್ರಾಮದಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿ ಮನೆ ನಿರ್ಮಿಸುತ್ತಿದ್ದ ಸಂದರ್ಭದಲ್ಲಿ ಅದನ್ನು ತಡೆಯಲು ಹೋದ ಆರ್ಎಫ್ಓ ಜಯಪ್ರಕಾಶ್ ಕೆ.ಕೆ. ಅವರಿಗೆ ಶಾಸಕ ಹರೀಶ್ ಪೂಂಜಾ ಅವರು ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆವೊಡ್ಡಿದ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿದ್ದಾರೆ.
ತಮಗೆ ಕರ್ತವ್ಯದ ಸಂದರ್ಭದಲ್ಲಿ ರಕ್ಷಣೆ ನೀಡುವಂತೆ ಕೋರಿ ಹಾಗೂ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಂಘ ಸಚಿವರ ಬಳಿ ಅರಣ್ಯಾಧಿಕಾರಿಗಳ ಸಂಘ ಮನವಿ ಮಾಡಿದೆ. ಅಧಿಕಾರಿ ವಿರುದ್ಧ ಅವಾಚ್ಯ ಶಬ್ದ ಬಳಸಿದ ಆರೋಪದ ಮೇಲೆ ಶಾಸಕ ಪೂಂಜಾ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ.
ಏನಿದು ಪ್ರಕರಣ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಮನೆ ನಿರ್ಮಿಸಲು ಮುಂದಾಗಿದ್ದರು. ಇದಕ್ಕೆ ಅರಣ್ಯ ಇಲಾಖೆಯ ಅಧಿಕಾರಿ ತಡೆವೊಡಿದ್ದರು. ಈ ಕುರಿತು ಮಾಹಿತಿ ಅರಿತ ಶಾಸಕ ಹರೀಶ್ ಪೂಂಜಾ ಸ್ಥಳಕ್ಕೆ ಆಗಮಿಸಿ, ಸ್ಥಳೀಯರ ಸಹಾಯದಿಂದ ತಾತ್ಕಾಲಿಕ ಶೆಡ್ ನಿರ್ಮಿಸಿ ಗೃಹಪ್ರವೇಶ ಮಾಡಿ ಹೋಗಿದ್ದರು. ಬಳಿಕ ಅಕ್ಟೋಬರ್ 9 ರಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತೆ ಮನೆ ತೆರವು ಮಾಡಲು ಮುಂದಾಗಿದ್ದರು. ಈ ವೇಳೆ, ಸ್ಥಳಕ್ಕೆ ಬಂದ ಶಾಸಕ ಹರೀಶ್ ಪೂಂಜಾ ಮತ್ತು ವಿಧಾನ ಪರಷಿತ್ ಸದಸ್ಯ ಪ್ರತಾಪ ಸಿಂಹ ನಾಯಕ ಅವರು ಮನೆ ತೆರವು ಗೊಳಿಸದಂತೆ ತಡೆವೊಡ್ಡಿದ್ದರು. ಇದೇ ವೇಳೆ ಆಕ್ರೋಶಗೊಂಡ ಶಾಸಕ ಹರೀಶ್ ಪೂಂಜಾ ಅವರು ಉಪ್ಪಿನಂಗಡಿ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ ಕೆ ಅವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆ ಬಳಿಕ ಈ ಕುರಿತಂತೆ ಉಪ್ಪಿನಂಗಡಿ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ ಕೆ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು, ಪೊಲೀಸರು ಐಪಿಸಿ ಸೆಕ್ಷನ್ 143, 353, 504, 149 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅರಣ್ಯಾಧಿಕಾರಿಗೆ ನಿಂದನೆ ಆರೋಪ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಪ್ರಕರಣ