ಬೆಂಗಳೂರು: ಇಷ್ಟು ದಿನಗಳ ಕಾಲ ಡ್ರಗ್ಸ್ ದಂಧೆಯಲ್ಲಿ ಮುಳುಗಿದ್ದ ವಿದೇಶಿ ಪ್ರಜೆಗಳು ಇದೀಗ ಕಿಡ್ನಿ ದಂಧೆಗೆ ಇಳಿದಿದ್ದಾರೆ. ಇದಕ್ಕೆ ಪೂರಕವೆಂಬಂತೆ ಸಾಮಾಜಿಕ ಜಾಲತಾಣದಲ್ಲಿ ಕಿಡ್ನಿ ಖರೀದಿ ಹಾಗೂ ಮಾರಾಟ ವ್ಯವಹಾರದಲ್ಲಿ ತೊಡಗಿದ್ದ ದಂಧೆಕೋರರನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಬಾಗಲೂರಿನ ಮಾರೇನಹಳ್ಳಿಯ ದುರ್ಗಾನಾಥ ಸಿಟಿ ರೆಸಿಡೆನ್ಸಿ ನಿವಾಸಿ ಡ್ನೂಡಿಮ್ ಓಬಿನ್ನಾ ಕಿಂಗ್ ಲೈ (30) ಬಂಧಿತ ಆರೋಪಿ.
ವ್ಯಾಪಾರ ವೀಸಾದಡಿ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಈತ, ಕಳೆದ ಏಪ್ರಿಲ್ 18ರಂದು ಪಾಸ್ಪೋರ್ಟ್ ಹಾಗೂ ವೀಸಾ ಅವಧಿ ಮುಕ್ತಾಯವಾದರೂ ನಗರದಲ್ಲೇ ನೆಲೆಯೂರಿದ್ದ. ಇದನ್ನು ಅರಿತ ಇನ್ಸ್ಪೆಕ್ಟರ್ ಅಣ್ಣಪ್ಪ ಕಾಗವಾಡ ನೇತೃತ್ವದ ತಂಡ ಏಕಾಏಕಿ ಮನೆ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ವೇಳೆ ಲ್ಯಾಪ್ಟಾಪ್ ಹಾಗೂ ಮೊಬೈಲ್ ಜಪ್ತಿ ಮಾಡಿ ಪರಿಶೀಲಿಸಿದಾಗ ಕಿಡ್ನಿ ದಂಧೆಯಲ್ಲಿ ಭಾಗಿಯಾಗಿರುವುದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಹಾಕುತ್ತಿದ್ದ ಲ್ಯಾಪ್ಟಾಪ್ ವಶಕ್ಕೆ ಪಡೆದುಕೊಂಡು ಆರೋಪಿಯ ಇಮೇಲ್ ಪರಿಶೀಲಿಸಿದಾಗ ಹಣದಾಸೆ ತೋರಿಸಿ ಕಿಡ್ನಿ ಮಾರಾಟ, ಖರೀದಿ ಮಾಡುವ ದಂಧೆ ಬೆಳಕಿಗೆ ಬಂದಿದೆ. ಇಮೇಲ್ಗಳನ್ನು ಸಾರ್ವಜನಿಕರಿಗೆ ಕಳುಹಿಸಿರುವುದು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿರುವುದು ತಿಳಿದುಬಂದಿದೆ.
ಈ ಬಗ್ಗೆ ಪ್ರಶ್ನಿಸಿದರೆ ಕಿಡ್ನಿ ಖರೀದಿ ಹಾಗೂ ಮಾರಾಟದ ಬಗ್ಗೆ ಜಾಹೀರಾತು ಪ್ರಕಟಿಸುತ್ತೇನೆ. ಕಿಡ್ನಿ ಅಗತ್ಯವಿದ್ದವರು ಹಣ ನೀಡುತ್ತಾರೆ. ಹಣ ಬೇಕಾದವರು ಕಿಡ್ನಿ ದಾನ ಮಾಡಲು ಮುಂದಾಗುತ್ತಾರೆ ಎಂದು ಹೇಳಿಕೆ ನೀಡಿದ್ದಾನೆ.
ಇದನ್ನು ಓದಿ: 2018ರ ಐಎಲ್ಎಫ್ಎಸ್ ಹಗರಣ; ಲಕ್ಷ ಕೋಟಿ ವಂಚಕ ರವಿ ಪಾರ್ಥಸಾರಥಿ ಬಂಧನ
ಪರಿಶೀಲನೆ ವೇಳೆ ಮನೆಯಲ್ಲಿದ್ದ ಮೂರು ಲ್ಯಾಪ್ ಟಾಪ್, 10 ಮೊಬೈಲ್, ಹಾರ್ಡ್ ಡಿಸ್ಕ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಕ್ರಮವಾಗಿ ನಗರದಲ್ಲಿ ನೆಲೆಯೂರಿದ್ದರಿಂದ ವಂಚನೆ ಹಾಗೂ ವಿದೇಶಾಂಗ ಇಲಾಖೆಯ ಕಾನೂನು ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದುವರೆಗೂ ಆರೋಪಿ ಎಷ್ಟು ಮಂದಿಗೆ ಮೋಸ ಮಾಡಿದ್ದಾನೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು, ಆತನ ಬ್ಯಾಂಕ್ ಖಾತೆ, ಮೊಬೈಲ್ ಕರೆಗಳು ಹಾಗೂ ಇಮೇಲ್ ಪರಿಶೀಲನೆ ಮಾಡುತ್ತಿದ್ದಾರೆ.