ಬೆಂಗಳೂರು: ವಿದ್ಯಾಭ್ಯಾಸ ಮಾಡಲೆಂದು ಬೆಂಗಳೂರಿಗೆ ಬಂದು ಮಾದಕ ವಸ್ತು ಕೊಕೈನ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಏಕೆನೆ ಒಂಕಾಕ್ವೊ ಎಂಬಾತನ ಕೈಗೆ ಪೊಲೀಸರು ಕೋಳ ತೊಡಿಸಿದ್ದಾರೆ.
ಆರೋಪಿ ನಗರದ ಹೆಣ್ಣೂರು ಪೊಲೀಸ್ ಠಾಣಾ ಸರಹದ್ದಿನ ಹೆಣ್ಣೂರು ಬಂಡೆ ಮುಖ್ಯರಸ್ತೆಯ ಭೈರವೇಶ್ವರ ಲೇಔಟ್ ಬಳಿ ಸಾರ್ವಜನಿಕರಿಗೆ ಕೊಕೈನ್ ಮಾರಾಟ ಮಾಡಲು ಪ್ರಯತ್ನಿಸಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಇನ್ನು, ಬಂಧಿತ ಆರೋಪಿಯನ್ನ ವಿಚಾರಣೆಗೆ ಒಳಪಡಿಸಿದಾಗ ತಾನು ನೈಜೀರಿಯಾ ದೇಶದಿಂದ ಭಾರತ ದೇಶಕ್ಕೆ ವಿದ್ಯಾಭ್ಯಾಸಕ್ಕೆಂದು ಬಂದು, ಇಲ್ಲಿನ ವೀಸಾ ನಿಯಮಗಳನ್ನ ಉಲ್ಲಂಘಿಸಿ, ನಗರದ ವಿವಿಧ ಸ್ಥಳಗಳಲ್ಲಿ ಗ್ರಾಹಕರಿಗೆ ಮಾದಕ ವಸ್ತು ಮಾರಾಟ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಆರೋಪಿಯಿಂದ 1.70 ಲಕ್ಷ ಮೌಲ್ಯದ ಕೊಕೈನ್ ಮತ್ತು ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಇನ್ನೂ ಯಾರಾದಾರೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ಅನುಮಾನವಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.