ಬೆಂಗಳೂರು: ಲೋಕಸಭಾ ಚುನಾವಣೆ ಬಳಿಕ ತೆರೆಮರೆಗೆ ಸರಿದಿದ್ದ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಮತ್ತೆ ಜೀವ ತುಂಬಲು ನಿರ್ಧರಿಸಲಾಗಿದ್ದು, ಕಾನೂನು ಹೋರಾಟಕ್ಕೆ ಮುಂದಾಗಿರುವುದಾಗಿ ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತ್ಯೇಕ ಲಿಂಗಾಯಿತ ಧರ್ಮಕ್ಕಾಗಿ ಕಾನೂನು ಹೋರಾಟ ನಡೆಸಲು ನಿರ್ಧರಿಸಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಶಿವಾನಂದ ಜಮಾದಾರ್ ನೇತೃತ್ವದಲ್ಲಿ ಸುಪ್ರಿಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗುತ್ತದೆ ಎಂದರು.
ಈಗಾಗಲೇ ರಾಜ್ಯ ಸರ್ಕಾರ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಕುರಿತು ಶಿಫಾರಸು ಮಾಡಿ ಕೇಂದ್ರಕ್ಕೆ ಕಳುಹಿಸಿದೆ. ಚಂಡು ಈಗ ಕೇಂದ್ರ ಸರ್ಕಾರದ ಅಂಗಳದಲ್ಲಿದೆ. ಆದರೆ, ಕೇಂದ್ರದಿಂದ ನಮಗೆ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ನಾವು ಕಾನೂನು ಹೋರಾಟದ ಹಾದಿ ತುಳಿಯಲು ನಿರ್ಧರಿಸಿದ್ದೇವೆ. ಸದ್ಯದಲ್ಲೇ ಸುಪ್ರೀಂಕೋರ್ಟ್ ಕದ ತಟ್ಟಲಿದ್ದೇವೆ ಎಂದರು.
ನ್ಯಾ.ನಾಗಮೋಹನ್ ದಾಸ್ ವರದಿಯಂತೆ ಲಿಂಗಾಯಿತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವ ಕುರಿತು ಶಿಫಾರಸು ಮಾಡುವಂತೆ ಕಳೆದ ತಿಂಗಳು ಮಹಾರಾಷ್ಟ್ರದಲ್ಲಿ ಹೋರಾಟ ನಡೆಸಲಾಗಿತ್ತು. ಅಲ್ಲಿನ ಸರ್ಕಾರಕ್ಕೂ ಮನವಿ ಸಲ್ಲಿಸಲಾಗಿತ್ತು. ಅದೇ ರೀತಿ ತೆಲಂಗಾಣ ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯಿತ ಧರ್ಮ ಹೋರಾಟ ಪ್ರಾರಂಭಿಸಲಾಗುತ್ತದೆ. ತೆಲಂಗಾಣ ರಾಜ್ಯದ ಮೂಲಕವೂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂಬುದು ನಮ್ಮ ಒತ್ತಾಯ. 2020 ರ ಮಾರ್ಚ್ 20 ರಂದು ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.