ಬೆಂಗಳೂರು : ಬೆಳ್ಳಂಬೆಳಗ್ಗೆ ಬಿಬಿಎಂಪಿ ಅಧಿಕಾರಿಗಳು ಡಾಲರ್ಸ್ ಕಾಲೋನಿಯ ಫುಟ್ ಪಾತ್ ತೆರವು ಕಾರ್ಯಾಚರಣೆ ನಡೆಸಿದರು. ಸಿಎಂ ನಿವಾಸದ ಆಸುಪಾಸಿನಲ್ಲಿದ್ದ ಅಂಗಡಿ ಮುಂಗಟ್ಟುಗಳನ್ನು ಏಕಾಏಕಿ ತೆರವುಗೊಳಿಸಿದ್ದಕ್ಕೆ ಸ್ಥಳೀಯರಿಂದ ಸಾಕಷ್ಟು ವಿರೋಧ ವ್ಯಕ್ತವಾಯಿತು.
ಆರ್.ಎಂ.ವಿ ಎರಡನೇ ಹಂತದಲ್ಲಿರುವ ಡಾಲರ್ಸ್ ಕಾಲೋನಿಗೆ ಬೆಳಗ್ಗೆಯೇ ಆಗಮಿಸಿದ ಬಿಬಿಎಂಪಿ ಅಧಿಕಾರಿಗಳು, ಫುಟ್ ಪಾತ್ ಅನ್ನು ಅತಿಕ್ರಮಣ ಮಾಡಿಕೊಂಡು ಕಟ್ಟಿದ್ದ ಅಂಗಡಿಯ ಮೆಟ್ಟಿಲು ಮತ್ತು ಕಬ್ಬಿಣದ ಗ್ರಿಲ್ ಗಳನ್ನು ತೆರವು ಮಾಡಿದರು. ಈ ವೇಳೆ ಅಂಗಡಿ ಮಾಲೀಕರು ಮತ್ತು ಬಿಬಿಎಂಪಿ ಅಧಿಕಾರಿಗಳ ನಡುವೆ ಮಾತುನ ಚಕಮಕಿ ನಡೆಯಿತು.
ತೆರವು ಮಾಡಿದ ವಸ್ತುಗಳನ್ನು ಕೊಂಡೊಯ್ಯಲು ಅಡ್ಡಿಪಡಿಸಿ ಅವುಗಳನ್ನು ತಮಗೆ ಮರಳಿಸಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ನಿರಾಕರಿಸಿದ ಪಾಲಿಕೆ ಸಿಬ್ಬಂದಿ ಪೊಲೀಸರ ಸಹಾಯದೊಂದಿಗೆ ತೆರವು ಮಾಡಿದ ವಸ್ತುಗಳನ್ನು ಕೊಂಡೊಯ್ದರು.
ಯಾವುದೇ ನೋಟಿಸ್ ಕೊಡದೆ ಏಕಾಏಕಿ ಬಂದು ಫುಟ್ ಪಾತ್ ತೆರವುಗೊಳಿಸಿದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ನಿವಾಸದ ಹತ್ತಿರವಿದೆ ಎನ್ನುವ ಕಾರಣಕ್ಕೆ ಹೀಗೆಲ್ಲಾ ಮಾಡುತ್ತಿದ್ದಾರೆ, ಮುಖ್ಯಮಂತ್ರಿಗಳು ನಿವಾಸದಲ್ಲಿ ಇದ್ದಾಗ ಜನರು ಓಡಾಟಕ್ಕೂ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.