ಬೆಂಗಳೂರು: ಲಾಕ್ಡೌನ್ ಮುಂದುವರೆದಿರುವುದರಿಂದ ನಗರದಲ್ಲೇ ಉಳಿದುಕೊಂಡಿರುವ ಬಡ ಜನರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮುಂದುವರೆಯಲಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿಸ ಅವರು, ಸಿಎಂ ಸೂಚನೆ ಮೇರೆಗೆ ನಿನ್ನೆಯ ಸಭೆಯಲ್ಲಿ ಕಾರ್ಮಿಕ ಇಲಾಖೆ ಈ ಹಿಂದಿನಂತೆಯೇ ಆಹಾರ ಪ್ಯಾಕೇಟ್ ತಯಾರಿಸಿ ವಿತರಣೆಯನ್ನು 17 ಮೇವರೆಗೂ ಮುಂದುವರೆಸುವಂತೆ ಕೇಳಿಕೊಳ್ಳಲಾಗಿದೆ. ಪಾಲಿಕೆ ವತಿಯಿಂದ ಆಹಾರ ಪ್ಯಾಕೇಟ್ ಕೊಡದೆ, ಆಹಾರ ಧಾನ್ಯಗಳನ್ನು ಮಾತ್ರ ವಿತರಿಸಲಾಗುವುದು ಎಂದರು. ಇನ್ನು ಬಿಬಿಎಂಪಿ ವ್ಯಾಪ್ತಿಯ ಬಿಲ್ಡರ್ಸ್ ಹಾಗೂ ಗುತ್ತಿಗೆದಾರರ ಸಭೆಯನ್ನು ಸಿಎಂ ನಿವಾಸದಲ್ಲಿ ನಡೆಸಲಾಗಿದೆ. ಈಗಾಗಲೇ ಬಿಲ್ಡರ್ಸ್ ಕಾರ್ಮಿಕರಿಗೆ 40 ದಿನಗಳ ಕಾಲ ಊಟ, ವಸತಿ ನೀಡಿದ್ದಾರೆ. ತಮ್ಮ ತಮ್ಮ ಕಟ್ಟಡ ನಿರ್ಮಾಣದ ಕಾಮಗಾರಿಗಳನ್ನು ಆರಂಭಿಸಲು ಸೂಚನೆ ನೀಡಲಾಗಿದೆ. ಅಲ್ಲದೆ ಈಗಾಗಲೇ ಮಂಜೂರಾಗಿರುವ ಹಾಗೂ ಲಾಕ್ಡೌನ್ ಮುಂಚಿತವಾಗಿ ಅನುಮೋದನೆಗೊಂಡ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಲು ಸೂಚನೆ ನೀಡಲಾಗಿದ್ದು, ರಸ್ತೆ ಕಾಮಗಾರಿಗಳು, ಕೆರೆ ಹಾಗೂ ಮಳೆ ನೀರುಗಾಲುವೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಡೆಸಲು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಇನ್ನು ಶಿವಾಜಿನಗರದಲ್ಲಿ ಹೌಸ್ ಕೀಪಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ 72 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ ಶಿವಾಜಿನಗರ ಪ್ರದೇಶದ ಸ್ಥಿತಿಗತಿ ನೋಡಿ ಕಂಟೈನ್ಮೆಂಟ್ ಝೋನ್ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇಡೀ ವಾರ್ಡ್ ಸೀಲ್ ಡೌನ್ ಮಾಡಲಾಗುವುದಿಲ್ಲ ಎಂದರು. ಮನೆಗೆಲಸ ಮಾಡುವವರು ಹತ್ತಿರದಲ್ಲಿ ಇದ್ದಲ್ಲಿ ಅವರಿಗೆ ಕೆಲಸ ನೀಡುವಂತೆ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಜೊತೆ ವಿಡಿಯೋ ಕಾನ್ಫರೆನ್ಸ್ ಸಭೆ ಮಾಡಿ ಸೂಚಿಸಲಾಗಿದೆ. ಆದರೆ ಕೆಲಸದ ಜೊತೆಗೆ ಮಾಸ್ಕ್, ಸ್ಯಾನಿಟೈಸರ್ ನೀಡಿ ಥರ್ಮಲ್ ಸ್ಕ್ರೀನಿಂಗ್ ಮಾಡುವಂತೆ ಸೂಚಿಸಲಾಗಿದೆ ಎಂದರು.