ಬೆಂಗಳೂರು: ಮಹಾಮಾರಿ ಕೊರೊನಾ ನಿಯಂತ್ರಿಸಲು ಲಾಕ್‌ಡೌನ್ ಹೇರಲಾಗ್ತಿದೆ. ಈ ಸಂದರ್ಭದಲ್ಲಿ ಕೆಲವರು ಅಡ್ಡ ದಾರಿ ಹಿಡಿದಿದ್ದಾರೆ. ಕೆಲಸ ಕಳೆದುಕೊಂಡವರಲ್ಲಿ ಕೆಲವರು ದರೋಡೆ, ಕಳ್ಳತನದಂತ ಕೃತ್ಯಗಳಿಗೆ ಇಳಿದಿದ್ದಾರೆ. ಈ ಖದೀಮರೀಗ ನಗರದಲ್ಲಿ ಫುಡ್ ಡೆಲಿವರಿ ಬಾಯ್ಸ್ ಗೆ ಕಾಡುತ್ತಿದ್ದಾರೆ.
ಸದ್ಯ ಕೊರೊನಾ ತಡೆಯಲು ರಾತ್ರಿ 8 ಗಂಟೆಯ ನಂತ್ರ ಜನರ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಆದರೆ ಬಹುತೇಕ ಮಂದಿ ಆನ್ ಲೈನ್ ಫುಡ್ ಅವಲಂಬಿಸಿದ್ದಾರೆ. ಹೀಗಾಗಿ ಆನ್ಲೈನ್ ಫುಡ್ ಬುಕ್ ಮಾಡಿದ್ದನ್ನು ಮನೆ ಮನೆಗೆ ತಲುಪಿಸುವ ಫುಡ್ ಬಾಯ್ಸ್ ಈಗ ಜೀವ ಭಯದಲ್ಲಿದ್ದಾರೆ.
ಯಾಕಂದ್ರೆ ಲಾಕ್‌ಡೌನ್ ಬಳಿಕ ದರೋಡೆಕೋರರ ಹಾವಳಿ ಹೆಚ್ಚಾಗಿದೆ. ಫುಡ್ ಡೆಲಿವರಿ ಬಾಯ್ಸ್ಅನ್ನೇ ಟಾರ್ಗೆಟ್ ಮಾಡಿರುವ ದುಷ್ಕರ್ಮಿಗಳು, ನಿರ್ಜನ ಪ್ರದೇಶಗಳಲ್ಲಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ಹಣ, ಮೊಬೈಲ್ ಗಳನ್ನ ದೋಚುತ್ತಿರುವ ಘಟನೆಗಳು ನಗರದಲ್ಲಿ ಬೆಳಕಿಗೆ ಬರ್ತಿವೆ. ಸದ್ಯ ಈ ಕುರಿತು ಡೆಲಿವರಿ ಬಾಯ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ:
ಫುಡ್ ಡೆಲಿವರಿ ಬಾಯ್ಸ್ ಕೆಲಸ ಹೆಚ್ಚು ಶುರುವಾಗುವುದೇ ಸಂಜೆಯ ಮೇಲೆ. ಸಂಜೆ ಯ ವೇಳೆ ಬಹುತೇಕ ಕಸ್ಟಮರ್ ಫುಡ್ ಆರ್ಡರ್ ಮಾಡ್ತಾರೆ. ಆದರೆ ಸಂಜೆ 7 ಗಂಟೆಯ ನಂತರ ಫುಡ್ ಆರ್ಡರ್ ಬಂದರೆ ಡೆಲಿವರಿ ಮಾಡಲು ಹೋಗ್ತಿವಿ. ಇತ್ತೀಚೆಗೆ ಡೆಲಿವರಿ ಬಾಯ್ ಆದಿತ್ಯ ಎಂಬಾತ ಫುಡ್ ಡೆಲಿವರಿಗೆ ತೆರಳಿದ್ದಾನೆ. ರಾತ್ರಿ 11.30ರಲ್ಲಿ ಫುಡ್ ಡೆಲಿವರಿ ಮಾಡಿ ಬೈಕ್‌ನಲ್ಲಿ ತೆರಳುತ್ತಿದ್ದ ಆದಿತ್ಯನನ್ನು ಹೊಂಗಸಂದ್ರದ ಬಳಿ ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಚೂರಿಯಿಂದ ಹೊಟ್ಟೆಗೆ ಇರಿದಿದ್ದಾರೆ. ರಕ್ಷಣೆಗಾಗಿ ಕೂಗಿಕೊಳ್ಳುತ್ತಿದ್ದಂತೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಇದೇ ರೀತಿ ಇಂತಹ ಕೃತ್ಯ ಬಹಳಷ್ಟು ನಡೆಯುತ್ತಿವೆ. ಹೀಗಾಗಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ರಾತ್ರಿ ಫುಡ್ ಡೆಲಿವರಿ ಮಾಡದಿರಲು ನಿರ್ಧಾರ:
ಫುಡ್ ಡೆಲಿವರಿ ಬಾಯ್ಸ್ ಗೆ ಜೀವ ಭಯ ಶುರುವಾಗಿದೆ. ಒಂದು ಫುಡ್ ಡೆಲಿವರಿ ಮಾಡಿದರೆ 50ರೂಪಾಯಿ ಸಿಗುತ್ತದೆ. ಹೀಗಾಗಿ 50 ರೂಪಾಯಿ ಹಣದ ಆಸೆಗಾಗಿ ಪ್ರಾಣ ಕಳೆದುಕೊಳ್ಳಬೇಕಾ. ಒಂದು ವೇಳೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರೆ ನಮ್ಮನ್ನು ನಂಬಿದ ನಮ್ಮ ಕುಟುಂಬಗಳು ಏನ್ ಮಾಡಬೇಕು. ಸಂಜೆಯ ನಂತರ ಯಾರೊಬ್ಬರು ಲಾಗಿನ್ ಆಗುವುದು ಬೇಡ. ಜೀವ ಉಳಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಹೊಟ್ಟೆ ಪಾಡಿಗೆ ಕೆಲಸಕ್ಕೆ ಬಂದಿದ್ದೇವೆ. ಒಗ್ಗಟ್ಟಿನಿಂದ ಇರೋಣ ಎಂದು ಫುಡ್ ಡೆಲಿವರಿ ಬಾಯ್ಸ್ ಮಾತಾನಾಡಿಕೊಂಡಿದ್ದಾರೆ.