ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ನಾಳೆ ಬೆಳಗ್ಗೆ 8 ಗಂಟೆಗೆ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಈದ್ಗಾ ಮೈದಾನಕ್ಕೆ ಇಂದು ಸಂಜೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲನೆ ನಡೆಸಿ, ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಈ ಸಮಾರಂಭಕ್ಕೆ ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯಲ್ಲೂ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯ ಸಾರ್ವಜನಿಕರು ಶಾಂತಿ ಪ್ರಿಯರು. ಹಾಗಾಗಿ ಯಾವುದೇ ಅಡಚಣೆ ಆಗುವುದಿಲ್ಲ ಎಂದು ಭಾವಿಸಿದ್ದೇನೆ. ಆದರೂ ಮೊದಲ ಬಾರಿಯ ಧ್ವಜಾರೋಹಣ ಆಗಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಧ್ವಜಾರೋಹಣ ಸಮಾರಂಭದಲ್ಲಿ ಸ್ಥಳೀಯ ಸಂಸದರು, ಶಾಸಕರು, ಜನಪತ್ರಿನಿಧಿಗಳು ಮತ್ತು ಸ್ಥಳೀಯ ನಾಗರಿಕರು ಭಾಗವಹಿಸಲಿದ್ದಾರೆ. ಮೈದಾನದ ಪಕ್ಕದಲ್ಲೇ ಇರುವ ಕಾರ್ಪೋರೇಷನ್ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ ಎಂದು ಗೃಹ ಸಚಿವರು ಹೇಳಿದರು.
ಕಾರ್ಯಕ್ರಮಕ್ಕೆ ಯಾರಿಗೂ ನಿರ್ಬಂಧವಿಲ್ಲ: ನಾವ್ಯಾರೂ ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿರಲಿಲ್ಲ. ಸ್ವಾತಂತ್ರ್ಯ ತರಲು ಬಹಳಷ್ಟು ಜನರು ತ್ಯಾಗ ಬಲಿದಾನ ನೀಡಿದ್ದಾರೆ. ಅವರನ್ನು ಸ್ಮರಣೆ ಮಾಡಿಕೊಳ್ಳುವ ಮೂಲಕ ದೇಶಭಕ್ತಿ ನಿರ್ಮಿಸುವಂತಹ ಸಂದರ್ಭ ಇದು. ಹಾಗಾಗಿ ಕಾರ್ಯಕ್ರಮಕ್ಕೆ ಯಾರಿಗೂ ನಿರ್ಬಂಧವಿಲ್ಲ, ಎಲ್ಲರೂ ಭಾಗವಹಿಸಬಹುದು ಎಂದರು.
ಮೈದಾನದಲ್ಲಿ ಬಿಗಿ ಬಂದೋಬಸ್ತ್: ಪಶ್ಚಿಮ ವಿಭಾಗದ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ ಭಾನುವಾರ ಆರ್.ಎ.ಎಫ್, ಕೆ.ಎಸ್ಆರ್ಪಿ ಹಾಗೂ ಡಿ-ಸ್ವಾಟ್ನ 400ಕ್ಕೂ ಅಧಿಕ ಸಿಬ್ಬಂದಿ ಅಜಾದ್ ನಗರದಿಂದ ಚಾಮರಾಜಪೇಟೆ ಮೈದಾನದವರೆಗೂ ಪಥಸಂಚಲನ ನಡೆಸಿದ್ದಾರೆ.
ಇದನ್ನೂ ಓದಿ: ಸಿಎಂ ಸ್ಥಾನದಿಂದ ತಾವು ಇಂತಹ ಕೀಳು ಮಟ್ಟದ ರಾಜಕಾರಣ ಮಾಡಬಾರದಿತ್ತು: ಡಿಕೆಶಿ
ಭದ್ರತೆ ವೀಕ್ಷಿಸಿದ ಗೃಹ ಸಚಿವರು, ಡಿಸಿಪಿ: ಸ್ವಾತಂತ್ರ್ಯೋತ್ಸವ ನಡೆಯಲಿರುವ ಮೈದಾನದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಾಗಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ, ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್, ಡಿಜಿ-ಐಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಭೇಟಿ ನೀಡಿದರು. ಅಲ್ಲದೇ ನಾಳಿನ ಕಾರ್ಯಕ್ರಮದ ಭದ್ರತೆ ಬಗ್ಗೆ ಮಾಹಿತಿ ಪಡೆದಿದ್ದಾರೆ.