ಬೆಂಗಳೂರು: ರಾಜ್ಯಾದ್ಯಂತ ಲಾಕ್‌ಡೌನ್ ತೆರವುಗೊಳಿಸುವ ಸರ್ಕಾರದ ನಿರ್ಧಾರಕ್ಕೆ ಎಫ್ಕೆಸಿಸಿಐ ಹರ್ಷ ವ್ಯಕ್ತಪಡಿಸಿದೆ.
ಲಾಕ್‌ಡೌನ್ ಸಡಿಲಗೊಳಿಸುವುದರ ಜೊತೆಗೆ ಕೋವಿಡ್-19 ನಿಯಂತ್ರಣಕ್ಕೆ 5 ಡಿ ಸೂತ್ರವನ್ನು ಸಿಎಂ ಘೋಷಿಸಿದ್ದಾರೆ. ಜೊತೆಗೆ ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಕೆಲಸದಲ್ಲಿ ತೊಡಗಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಈ ಮೂಲಕ ರಾಜ್ಯದ ಜನತೆಯಲ್ಲಿ ಮತ್ತಷ್ಟು ಧೈರ್ಯ ತುಂಬಿದ್ದಾರೆ ಎಂದು ಎಫ್ಕೆಸಿಸಿಐ ಅಧ್ಯಕ್ಷ ಸಿ. ಆರ್. ಜನಾರ್ಧನ್ ಹೇಳಿದ್ದಾರೆ.
ಈ ಸಂಬಂಧ ನಮ್ಮ ಮಹಾ ಸಂಸ್ಥೆಯು ಕೈಗಾರಿಕೆ, ವ್ಯಾಪಾರ ಹಾಗೂ ಸೇವಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲರಿಗೂ ಕೋವಿಡ್ -19 ರ ನಿಯಂತ್ರಣಕ್ಕೆ ಸಂಬಂಧಪಟ್ಟ ಮುಂಜಾಗ್ರತಾ ಕ್ರಮಗಳನ್ನು ಒಳಗೊಂಡ ಭಿತ್ತಿಪತ್ರಗಳನ್ನು ಮುದ್ರಿಸಿ ಹಂಚಿದೆ. ಕೋವಿಡ್ 19 ರ ನಿಯಂತ್ರಣಕ್ಕೆ ಸರ್ಕಾರದ ಜೊತೆಗೆ ಕೈಜೋಡಿಸಬೇಕೆಂದು ಕರೆ ನೀಡಲಾಗಿದೆ ಎಂದರು.